ಭಾರತೀಯ ವಾಯುಪಡೆ ಬಲ ಹೆಚ್ಚಿಸಿದ “ಬ್ರಹ್ಮೋಸ್‌”

0
17

ರಷ್ಯಾ ನಿರ್ಮಿತ ಎಸ್‌ಯು–30ಎಂಕೆಐ ಫೈಟರ್‌ ಜೆಟ್‌ಗಳಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ ನಿಗದಿತ ಗುರಿ ತಲುಪುವ ಮೂಲಕ ಶತ್ರು ಪಾಳೆಯ ಮೇಲೆ ವೈಮಾನಿಕ ಪ್ರಹಾರ ನಡೆಸುವ ವಾಯುಪಡೆ ಬಲಕ್ಕೆ ಶಕ್ತಿ ತುಂಬಿದೆ.

ನವದೆಹಲಿ: ರಷ್ಯಾ ನಿರ್ಮಿತ ಎಸ್‌ಯು–30ಎಂಕೆಐ ಫೈಟರ್‌ ಜೆಟ್‌ಗಳಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ ನಿಗದಿತ ಗುರಿ ತಲುಪುವ ಮೂಲಕ ಶತ್ರು ಪಾಳೆಯ ಮೇಲೆ ವೈಮಾನಿಕ ಪ್ರಹಾರ ನಡೆಸುವ ವಾಯುಪಡೆ ಬಲಕ್ಕೆ ಶಕ್ತಿ ತುಂಬಿದೆ.

ದೇಶದ ದಕ್ಷಿಣ ಭಾಗದಲ್ಲಿರುವ ವಾಯುನೆಲೆಯಿಂದ ಮೇ 22 ರ ಬುಧವಾರ ನಭಕ್ಕೆ ಹಾರಿದ ಎಸ್‌ಯು–20ಎಂಕೆಐ, 300 ಕಿ.ಮೀ ದೂರ ಕ್ರಮಿಸಿ, ಕಾರ್‌ನಿಕೋಬಾರ್‌ ದ್ವೀಪದ ಭೂಪ್ರದೇಶದಲ್ಲಿ ಗುರುತಿಸಲಾಗಿದ್ದ ಗಮ್ಯ ಸ್ಥಾನಕ್ಕೆ ಕ್ಷಿಪಣಿಯನ್ನು ಹಾರಿಸಿತು. ವಾಯುಪಡೆ ಅಧಿಕಾರಿಗಳಲ್ಲದೇ, ಡಿಆರ್‌ಡಿಒ ಹಾಗೂ ಬ್ರಹ್ಮೋಸ್‌ ಏರೋಸ್ಪೇಸ್‌ನ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಈ ಯಶಸ್ವಿ ಕಾರ್ಯಾಚರಣೆಗೆ ಸಾಕ್ಷಿಯಾದರು.

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂಬ ವಾಯಪಡೆಯ ನಿರ್ಧಾರ ಈ ಪರೀಕ್ಷೆಯಿಂದ ಮತ್ತಷ್ಟೂ ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಸಾಗರದಲ್ಲಿರುವ ಗುರಿ ತಲುಪಬಲ್ಲ ಹಾಗೂ ನೆಲದಲ್ಲಿನ ಗುರಿ ಮುಟ್ಟಬಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನೆರವೇರಬೇಕು ಎಂಬುದು ವಾಯುಪಡೆಯ ಬೇಡಿಕೆ. ಹೀಗಾಗಿ ತಿಂಗಳೊಳಗಾಗಿ ಮತ್ತೊಂದು ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ನಂತರ 300 ಕಿ.ಮೀ. ದೂರ ಕ್ರಮಿಸುವ ಈ ಕ್ಷಿಪಣಿ ವಾಯುಪಡೆ ಬತ್ತಳಿಕೆ ಸೇರಲಿದೆ’ ಎಂದು ಬ್ರಹ್ಮೋಸ್‌ ಏರೋಸ್ಪೇಸ್‌ ಅಧಿಕಾರಿಗಳು ಹೇಳಿದರು.

ಸದ್ಯ, ನೌಕಾಪಡೆಯ 11 ಯುದ್ಧನೌಕೆಗಳಲ್ಲಿ  ಬ್ರಹ್ಮೋಸ್‌ ಕ್ಷಿಪಣಿಗಳನ್ನು ಅಳವಡಿಸಿದ್ದರೆ, ಸೇನೆಯ ಮೂರು ರೆಜಿಮೆಂಟ್‌ಗಳ ಬಳಿ ಈ ಪ್ರಬಲ ಕ್ಷಿಪಣಿ ವ್ಯವಸ್ಥೆ ಇದೆ. ವಾಯುಪಡೆಯೂ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೊಂದಿದರೆ, ಅತಿವೇಗದಲ್ಲಿ ಗುರಿ ತಲುಪಬಲ್ಲ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.