ಭಾರತೀಯ ನೌಕಾಪಡೆಗೆ ನೂತನ ಮುಖ್ಯಸ್ಥ “ಕರಂಬೀರ್‌ ಸಿಂಗ್‌”

0
46

ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಅವರು ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಮೇ 31 ರ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಹೊಸದಿಲ್ಲಿ: ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಅವರು ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಮೇ 31 ರ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. 

ಅಡ್ಮಿರಲ್‌ ಸುನೀಲ್‌ ಲಂಬಾ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಕರಂಬೀರ್‌ ಸಿಂಗ್‌ ತುಂಬಿದ್ದಾರೆ. ನೌಕಾಪಡೆಯಲ್ಲಿ ಈ ಮೊದಲು ಹೆಲಿಕಾಪ್ಟರ್‌ ಪೈಲಟ್‌ ಆಗಿ ಸೇವೆ ಸಲ್ಲಿಸಿದವರೊಬ್ಬರು ಈ ಹುದ್ದೆಗೇರಿದ್ದು ಇದೇ ಮೊದಲು. 

ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಕರಂಬೀರ್‌ ಸಿಂಗ್‌ ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾ ಕಮಾಂಡ್‌ನಲ್ಲಿ ಫ್ಲ್ಯಾಗ್‌ ಆಫಿಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 1980ರಲ್ಲಿ ನೌಕಾಪಡೆ ಸೇರಿದ ಇವರು 39 ವರ್ಷಗಳ ಕಾಲ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ನೇವಿ ಚೀಫ್‌ ಆಗಿದ್ದಾರೆ. 

ಬಲವರ್ಧನೆ ನನ್ನ ಗುರಿ: ನೌಕಾಪಡೆಯ 24ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕರಂಬೀರ್‌, ”ಇದು ನನಗೆ ದೊರೆತ ಬಹುದೊಡ್ಡ ಗೌರವ. ನನ್ನ ಪೂರ್ವಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದು ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಸಾಗರ ತೀರದಲ್ಲಿ ಯಾವುದೇ ಭದ್ರತಾ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವಂತೆ ನೌಕಾಪಡೆಯನ್ನು ಆಧುನೀಕರಣಗೊಳಿಸಲಾಗುವುದು,” ಎಂದು ಹೇಳಿದ್ದಾರೆ. 

ಕರಂಬೀರ್‌ ಸಿಂಗ್‌ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದ ವೇಳೆ, ಸೇವಾ ಹಿರಿತನ ಕಡೆಗಣಿಸಲಾಗಿದೆ ಎಂದು ಆಪಾದಿಸಿ ಅಂಡಮಾನ್‌ ಮತ್ತು ನಿಕೋಬಾರ್‌ ಕಮಾಂಡ್‌ ವೈಸ್‌ ಅಡ್ಮಿರಲ್‌ ಬಿಮಲ್‌ ವರ್ಮಾ ಅವರು ಸಶಸ್ತ್ರ ಪಡೆಗಳ ಪ್ರಾಧಿಕಾರದ ಮೊರೆ ಹೋಗಿದ್ದರು. ರಕ್ಷಣಾ ಸಚಿವಾಲಯ ಅವರ ಅರ್ಜಿ ನಿರಾಕರಿಸಿದ್ದರಿಂದ ಪ್ರಾಧಿಕಾರದ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಜುಲೈ 17ರಂದು ನಡೆಸುವುದಾಗಿ ಹೇಳಿದ್ದ ಪ್ರಾಧಿಕಾರ ಅಲ್ಲಿಯವರೆಗೂ ಕರಂಬೀರ್‌ ನೇಮಕಕ್ಕೆ ಅಡ್ಡಿಯಲ್ಲ ಎಂದು ಹೇಳಿತ್ತು. ಹೀಗಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರು ಹುದ್ದೆಯಲ್ಲಿ ಮುಂದುವರಿಯುವುದು ತೀರ್ಪಿನ ಮೇಲೆ ಅವಲಂಬಿತವಾಗಿದೆ. ತೀರ್ಪು ಇವರ ನೇಮಕ ಎತ್ತಿಹಿಡಿದಲ್ಲಿ 2021ರವರೆಗೂ ಸೇವೆಯಲ್ಲಿ ಮುಂದುವರಿಯಲಿದ್ದಾರೆ.