ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಗುತ್ತಿಗೆ ಪಟ್ಟಿಯಲ್ಲಿ ಎ ಗ್ರೇಡ್​ಗೆ ಸುಶೀಲ್, ಸಾಕ್ಷಿ ಬಡ್ತಿ

0
560

ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಸಾಕ್ಷಿ ಮಲಿಕ್ ಅವರಿಗೆ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಗುತ್ತಿಗೆ ಪಟ್ಟಿಯಲ್ಲಿ ಬಿ ಶ್ರೇಣಿಯಿಂದ ಎ ಶ್ರೇಣಿಗೆ ಬಡ್ತಿ ನೀಡಲಾಗಿದೆ.

ಮುಂಬೈ: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಸಾಕ್ಷಿ ಮಲಿಕ್ ಅವರಿಗೆ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಗುತ್ತಿಗೆ ಪಟ್ಟಿಯಲ್ಲಿ ಬಿ ಶ್ರೇಣಿಯಿಂದ ಎ ಶ್ರೇಣಿಗೆ ಬಡ್ತಿ ನೀಡಲಾಗಿದೆ. ಈ ಹಿಂದಿನ ಪಟ್ಟಿಯಲ್ಲಿ ಕಣ್ತಪ್ಪಿನಿಂದಾಗಿ ಅವರಿಬ್ಬರನ್ನು ಬಿ ಗ್ರೇಡ್​ಗೆ ಸೇರಿಸಲಾಗಿತ್ತು ಎಂದು ಡಬ್ಲ್ಯುಎಫ್​ಐ ಹೇಳಿಕೊಂಡಿದೆ.

ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟಿರುವ ಸುಶೀಲ್, ಸಾಕ್ಷಿ ಅವರಂಥ ಕ್ರೀಡಾಪಟುಗಳನ್ನು ಬಿ ಗ್ರೇಡ್​ನಲ್ಲಿಡುವುದು ಸರಿಯಲ್ಲ ಎಂದು ಡಬ್ಲ್ಯುಎಫ್​ಐ ಅಧ್ಯಕ್ಷ ಬ್ರಿಜ್​ಭೂಷಣ್ ಶರಣ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ಸುಶೀಲ್, ಸಾಕ್ಷಿ ಈ ಬಗ್ಗೆ ದೂರು ಹೇಳಿಕೊಂಡಿರಲಿಲ್ಲ. ನಾವೇ ತಪ್ಪು ತಿದ್ದಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಸುಶೀಲ್ 2008ರ ಒಲಿಂಪಿಕ್ಸ್​ನಲ್ಲಿ ಕಂಚು ಮತ್ತು 2012ರಲ್ಲಿ ಬೆಳ್ಳಿ ಜಯಿಸಿದ್ದರೆ, ಸಾಕ್ಷಿ 2016ರಲ್ಲಿ ಕಂಚು ಗೆದ್ದಿದ್ದರು.

ಈ ಮುನ್ನ ಎ ಗ್ರೇಡ್​ನಲ್ಲಿ ಮೂವರು ಕುಸ್ತಿಪಟುಗಳು ಮಾತ್ರ ಇದ್ದರು. ಅವರೆಂದರೆ ಭಜರಂಗ್ ಪೂನಿಯಾ, ವಿನೇಶ್ ಪೋಗಟ್ ಮತ್ತು ಪೂಜಾ ದಾಂಡ. ಈಗ ಈ ಸಂಖ್ಯೆ 5ಕ್ಕೇರಿದೆ. ಎ ಗ್ರೇಡ್ ಕುಸ್ತಿಪಟುಗಳು ವಾರ್ಷಿಕ 30 ಲಕ್ಷ ರೂ. ಪಡೆಯಲಿದ್ದಾರೆ. ಬಿ ಗ್ರೇಡ್​ನಲ್ಲಿ ಈಗ ಯಾವುದೇ ಕುಸ್ತಿಪಟುಗಳು ಸ್ಥಾನ ಪಡೆದಿಲ್ಲ.

ಸಿ ಗ್ರೇಡ್​ನಲ್ಲಿ ದಿವ್ಯಾ ಕಾಕ್ರನ್, ರಿತು ಪೋಗಟ್ ಸಹಿತ 7 ಕುಸ್ತಿಪಟುಗಳಿದ್ದರೆ, ಡಿ ಗ್ರೇಡ್​ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ಸ್ವರ್ಣ ವಿಜೇತ ರಾಹುಲ್ ಅವಾರೆ ಸಹಿತ 9 ಕುಸ್ತಿಪಟುಗಳಿದ್ದಾರೆ. ಇವರೆರಡು ಶ್ರೇಣಿಯ ಕುಸ್ತಿಪಟುಗಳು ಕ್ರಮವಾಗಿ ವಾರ್ಷಿಕ 10 ಮತ್ತು 5 ಲಕ್ಷ ರೂ. ಪಡೆಯಲಿದ್ದಾರೆ. ವಾರ್ಷಿಕ 3 ಲಕ್ಷ ರೂ. ಹೊಂದಿರುವ ಇ ಗ್ರೇಡ್​ನಲ್ಲಿ ನಾಲ್ವರು ಸ್ಥಾನ ಪಡೆದಿದ್ದಾರೆ. 1.20 ಲಕ್ಷ ರೂಪಾಯಿಯ ಎಫ್ ಗ್ರೇಡ್​ನಲ್ಲಿ ಓರ್ವ ಪೈಲ್ವಾನ್ ಸ್ಥಾನ ಪಡೆದಿದ್ದಾರೆ. -ಪಿಟಿಐ