ಭಾರತದ ಲಕ್ಷ್ಯ ಸೇನ್‌ಗೆ 2019 ರ ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಕಿರೀಟ

0
10

ಅಮೋಘ ಆಟ ಆಡಿದ ಭಾರತದ ಲಕ್ಷ್ಯ ಸೇನ್‌ ಅವರು ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಅಲಮೆರ್‌, ನೆದರ್ಲೆಂಡ್ಸ್‌ (ಪಿಟಿಐ): ಅಮೋಘ ಆಟ ಆಡಿದ ಭಾರತದ ಲಕ್ಷ್ಯ ಸೇನ್‌ ಅವರು ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಅಕ್ಟೋಬರ್ 13 ರ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಲಕ್ಷ್ಯ 15–21, 21–14, 21–15ರಲ್ಲಿ ಜಪಾನ್‌ನ ಯುಸಕೆ ಒನೊಡೆರಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 160ನೇ ಸ್ಥಾನದಲ್ಲಿದ್ದ ಒನೊಡೆರಾ, ಮೊದಲ ಗೇಮ್‌ನಲ್ಲಿ ಚುರುಕಿನ ಆಟ ಆಡಿ 11–10, 14–13ರಲ್ಲಿ ಮುನ್ನಡೆ ಗಳಿಸಿದ್ದರು. ದ್ವಿತೀಯಾರ್ಧದಲ್ಲೂ ಗುಣಮಟ್ಟದ ಆಟ ಆಡಿ  ಸುಲಭವಾಗಿ ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲಿ ಲಕ್ಷ್ಯ, ತಿರುಗೇಟು ನೀಡಿದರು. 12–8ರಿಂದ ಮುನ್ನಡೆ ಗಳಿಸಿದ್ದ ಅವರು ನಂತರವೂ ನಿರಂತರವಾಗಿ ಪಾಯಿಂಟ್ಸ್‌ ಗಳಿಸಿ ಮುನ್ನಡೆಯನ್ನು 18–11ಕ್ಕೆ ಹೆಚ್ಚಿಸಿಕೊಂಡರು. ಭಾರತದ ಆಟಗಾರನ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ನಿರುತ್ತರರಾದ ಒನೊಡೆರಾ ಗೇಮ್‌ ಕೈಚೆಲ್ಲಿದರು. ಮೂರನೇ ಗೇಮ್‌ನಲ್ಲಿ ಭಾರತದ ಆಟಗಾರ 11–8 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 72ನೇ ಸ್ಥಾನದಲ್ಲಿರುವ ಲಕ್ಷ್ಯ, ದ್ವಿತೀಯಾರ್ಧದಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ಆದರೂ ದಿಟ್ಟ ಆಟ ಆಡಿ ಸಂಭ್ರಮಿಸಿದರು.