ಭಾರತದ ರಫ್ತು ವಹಿವಾಟು 6 ತಿಂಗಳ ಗರಿಷ್ಠ ಮಟ್ಟದ ಕಡೆ

0
61

ದೇಶದ ರಫ್ತು ವಹಿವಾಟು ಮೇ ತಿಂಗಳಿನಲ್ಲಿ ಶೇ 20.18 ರಷ್ಟು ಹೆಚ್ಚಾಗಿದ್ದು, ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ನವದೆಹಲಿ: ದೇಶದ ರಫ್ತು ವಹಿವಾಟು ಮೇ ತಿಂಗಳಿನಲ್ಲಿ ಶೇ 20.18 ರಷ್ಟು ಹೆಚ್ಚಾಗಿದ್ದು, ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಮೌಲ್ಯದ ಲೆಕ್ಕದಲ್ಲಿ 1.93 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. ಈ ಹಿಂದೆ 2017ರ ನವೆಂಬರ್‌ನಲ್ಲಿ ರಫ್ತು ವಹಿವಾಟು ಶೇ 30.55 ರಷ್ಟು ಏರಿಕೆ ಕಂಡಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕ, ಔಷಧ ಮತ್ತು ಎಂಜಿನಿಯರಿಂಗ್‌ ವಲಯಗಳ ಉತ್ತಮ ಬೆಳವಣಿಗೆಯಿಂದ ಈ ಪ್ರಗತಿ ಸಾಧ್ಯವಾಗಿದೆ.

ಆದರೆ, ಕಬ್ಬಿಣದ ಅದಿರು, ಜವಳಿ, ಹರಳು ಮತ್ತು ಚಿನ್ನಾಭರಣ, ಕೈಮಗ್ಗ ರಫ್ತು ನಕಾರಾತ್ಮಕ ಮಟ್ಟವನ್ನು ತಲುಪಿದೆ.

ಆಮದು ವಹಿವಾಟು: ಮೇ ತಿಂಗಳಿನಲ್ಲಿ ಆಮದು ಶೇ 14.85 ರಷ್ಟು ಏರಿಕೆ ಕಂಡಿದ್ದು, 2.91 ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿವೆ.

ತೈಲ ಆಮದು ಶೇ 49 ರಷ್ಟು ಹೆಚ್ಚಾಗಿದ್ದು, 77,050 ಕೋಟಿಗೆ ತಲುಪಿದೆ. ಚಿನ್ನದ ಆಮದು ಮಾತ್ರ ಶೇ 30 ರಷ್ಟು ಇಳಿಕೆ ಕಂಡಿದೆ.

ಹಣಕಾಸು ವರ್ಷ ಉತ್ತಮವಾಗಿರಲಿದೆ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮರುಪಾವತಿ ವಿಳಂಬ ಸಮಸ್ಯೆ ಬಹುತೇಕ ತಗ್ಗಿದೆ. ಹಿಂದಿನ ಹಣಕಾಸು ವರ್ಷಕ್ಕಿಂತಲೂ (2017–18) ಪ್ರಸಕ್ತ ಹಣಕಾಸು ವರ್ಷವು (2018–19) ಉತ್ತಮವಾಗಿರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜಿಎಸ್‌ಟಿ ಮರುಪಾವತಿ ಮಾಡುತ್ತಿರುವುದರಿಂದ ತಯಾರಕರಿಗೆ ದುಡಿಯುವ ಬಂಡವಾಳದ ಕೊರತೆಯ ಸಮಸ್ಯೆ ನೀಗುತ್ತಿದೆ. ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಸಲುವಾಗಿ ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳ ಜತೆಗೆ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

***

ಚಾಲ್ತಿ ಖಾತೆ ಕೊರತೆ ಹೆಚ್ಚಳ

2017–18ನೇ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಜಿಡಿಪಿಯ ಶೇ 1.9 ರಷ್ಟು ಹೆಚ್ಚಾಗಿದೆ. ಮೌಲ್ಯದ ಲೆಕ್ಕದಲ್ಲಿ 3.26 ಲಕ್ಷ ಕೋಟಿಗೆ ತಲುಪಿದೆ.

ವ್ಯಾಪಾರ ಕೊರತೆ ಅಂತರ (ಆಮದು ಮತ್ತು ರಫ್ತು ನಡುವಣ ಅಂತರ) ಹೆಚ್ಚಾಗಿರುವುದರಿಂದ ಚಾಲ್ತಿ ಖಾತೆ ಕೊರತೆಯು ಮೂರು ಪಟ್ಟು ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿ ನೀಡಿದೆ.

ಮಾರ್ಚ್‌ ತ್ರೈಮಾಸಿಕಕ್ಕೆ ಚಾಲ್ತಿ ಖಾತೆ ಕೊರತೆಯು  17,420  ಕೋಟಿಗಳಿಂದ 87,100 ಕೋಟಿಗೆ (ಶೇ 0.9 ರಿಂದ ಶೇ 1.9ಕ್ಕೆ) ಏರಿಕೆಯಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೊರತೆ ಪ್ರಮಾಣ ಶೇ 2.1 ರಷ್ಟಿತ್ತು. 2017–18ನೇ ಹಣಕಾಸು ವರ್ಷದಲ್ಲಿ ವ್ಯಾಪಾರ ಕೊರತೆಯು  7.50 ಲಕ್ಷ ಕೋಟಿಯಿಂದ 10.72 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

**

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಇಳಿಕೆಯಿಂದ ಹಣದ ಒಳಹರಿವು ಸುಧಾರಿಸಲಿದ್ದು, ರಫ್ತು ವಹಿವಾಟು ಹೆಚ್ಚಾಗಲಿದೆ.

–ಅದಿತಿ ನಾಯರ್, ‘ಇಕ್ರಾ’ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ