ಭಾರತದ ಮೊದಲ ಪತ್ರಿಕಾಛಾಯಾಗ್ರಾಹಕಿ

0
27

1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿ ಕೆಂಪುಕೋಟೆಯ ಮೇಲೆ ಮೊದಲ ತ್ರಿವರ್ಣ ಧ್ವಜ ಹಾರಿದ ಕ್ಷಣ, ಮಹಾತ್ಮ ಗಾಂಧೀಜಿ ಗುಂಡೇಟಿಗೆ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದ ಗಳಿಗೆ, ಅಖಂಡ ಭಾರತ ಇಬ್ಭಾಗಿಸಿ ಪಾಕಿಸ್ತಾನ ರಚನೆಗಾಗಿ ಮುಖಂಡರು ನಡೆಸಿದ ಸಭೆಗಳು, ದಲೈಲಾಮಾ ಟಿಬೆಟ್‌ ಗಡಿ ದಾಟಿ ಭಾರತದ ನೆಲಕ್ಕೆ ಕಾಲಿಟ್ಟ ಕ್ಷಣಗಳನ್ನು ಛಾಯಾಚಿತ್ರಗಳ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಕೀರ್ತಿ ಸಲ್ಲುವುದು ಭಾರತದ ಮೊದಲ ಪತ್ರಿಕಾ ಛಾಯಾಗ್ರಾಹಕಿ ಹೊಮೈ ವ್ಯಾರವಾಲಾ ಅವರಿಗೆ.

ಡಿ.9 ವ್ಯಾರವಾಲಾ ಅವರ 104ನೇ ಜನ್ಮದಿನೋತ್ಸವ. ಅವರಿಗೆ ಡೂಡಲ್‌ ಗೌರವ ನೀಡುವ ಮೂಲಕ ಗೂಗಲ್‌ ಕಂಪೆನಿ ಸ್ಮರಿಸಿದೆ.

ಸ್ವತಂತ್ರ ಪೂರ್ವದಲ್ಲಿ ಪುರಷರ ವೃತ್ತಿಯೆಂದೆ ಭಾವಿಸಿದ್ದ ಛಾಯಾಗ್ರಾಹಣ ಕಲೆ ಕರಗತ ಮಾಡಿಕೊಂಡ ವ್ಯಾರವಾಲಾ ದೇಶದ ಐತಿಹಾಸಿಕ ಘಟನೆಗಳನ್ನು ಚಿತ್ರ ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಿಸಿದ್ದಾರೆ.

1913 ಡಿಸೆಂಬರ್‌ 9 ರಂದು ಅಂದಿನ ಬಾಂಬೆ ಪ್ರಾಂತ್ಯದ ನವಸಾರಿ ಊರಿನ ಪಾರ್ಸಿ ಕುಟುಂಬದಲ್ಲಿ ಹೊಮೈ ಜನಿಸಿದರು. ಇವರು ಬಾಂಬೆಯ ಜೆ.ಜೆ.ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಬಳಿಕ ಇಷ್ಟಪಟ್ಟು ಆಯ್ದುಕೊಂಡಿದ್ದು ಛಾಯಾಗ್ರಾಹಣ ವೃತ್ತಿ. ಇವರಲ್ಲಿ ಛಾಯಾಗ್ರಹಣದ ಆಸಕ್ತಿ ಮೂಡಲು ಪತಿ ಮಾಣೆಕ್‌ಷಾ ವ್ಯಾರವಾಲಾ ಸ್ಫೂರ್ತಿಯಾಗಿದ್ದರು. ಮಾಣೆಕ್‌ಷಾ ಆಗ ‘ಟೈಮ್ಸ್‌ ಆಫ್‌ ಇಂಡಿಯಾ’ದ ಪತ್ರಿಕಾಛಾಯಾಗ್ರಾಹಕರಾಗಿದ್ದರು.

ಹೊಮೈ 1930ರಲ್ಲಿ ‘ಇಲ್ಲಸ್ಟ್ರೇಟಡ್‌ ವೀಕ್ಲಿ ಆಫ್‌ ಇಂಡಿಯಾ’ ನಿಯತಕಾಲಿಕೆಯಲ್ಲಿ ಕೆಲಸ ಆರಂಭಿಸಿ ಎರಡನೇ ಮಹಾಯುದ್ಧದ ಸಂದರ್ಭಗಳನ್ನು ಸೆರೆಹಿಡಿದಿದ್ದಾರೆ. ಬಳಿಕ ‘ಬ್ರಿಟನ್‌ನ ವಾರ್ತಾ ಸೇವೆ’ಯಲ್ಲೂ ಸೇವೆ ಸಲ್ಲಿಸಿದ ಇವರು ಸುಮಾರು 30 ವರ್ಷಗಳ ಕಾಲದ ಪ್ರಮುಖ ಘಟನೆಗಳನ್ನು ಕ್ಯಾಮೆರಾ ಕಣ್ಣಲ್ಲಿ ಕಲೆಹಾಕಿದ್ದಾರೆ.

ಮಾಣೇಕ್‌ಷಾ 1969ರಲ್ಲಿ ಮರಣ ಹೊಂದಿದ ಮರುವರ್ಷ ವ್ಯಾರವಾಲಾ ಛಾಯಾಗ್ರಾಹಣ ವೃತ್ತಿ ತ್ಯಜಿಸಿ ಗುಜರಾತ್‌ನ ವಡೊದರಕ್ಕೆ ಬಂದು, ಇದ್ದ ಒಬ್ಬ ಮಗ ಫಾರುಕ್‌ನೊಂದಿಗೆ ನೆಲೆಸಿದರು. ಫಾರುಕ್‌ 1982ರಲ್ಲಿ ಕ್ಯಾನ್ಸರ್‌ನಿಂದ ಸತ್ತಾಗ ವ್ಯಾರವಾಲಾ ಒಬ್ಬಂಟಿಯಾದರು. ಅಪರೂಪದ ಚಿತ್ರಗಳ ರಾಶಿಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಇವರು ಕೊನೆಗಾಲದವರೆಗೂ ಏಕಾಂಕಿಯಾಗಿ ಬದುಕಿದ್ದು ವಿಪರ್ಯಾಸವೆ ಸರಿ.

ಇವರ ಬಹುತೇಕ ಚಿತ್ರಗಳು ‘ಡಾಲ್ಡಾ 13’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಇವರ ಮೊದಲ ಕಾರಿನ ನಂಬರ್‌ ಪ್ಲೇಟ್‌ ಡಿಎಲ್‌ಡಿ ಅಕ್ಷರಗಳಿಂದ ಕೂಡಿತ್ತು, ಹೊಮೈ ತಮ್ಮ ಪತಿ ಮಾಣೆಕ್‌ಷಾ ಅವರನ್ನು 13ನೇ ವಯಸ್ಸಿಗೆ ಭೇಟಿಯಾಗಿದ್ದರು, ಅವರ ಹುಟ್ಟಿದ ವರ್ಷ 1913 ಆಗಿತ್ತು. ಅವುಗಳ ನೆನಪಿಗಾಗಿ ಈ ಹೆಸರನ್ನು ಬಳಸುತ್ತಿದ್ದರು.

ಇವರಿಗೆ ದೇಶದ ಎರಡನೆ ಅತ್ಯುನ್ನತ ಗೌರವವಾದ ‘ಪದ್ಮ ವಿಭೂಷಣ’ 2011ರಲ್ಲಿ ಒಲಿಯಿತು. 2012ರಲ್ಲಿ 98ನೇ ಇಳಿವಯಸ್ಸಿನಲ್ಲಿ ವಡೊದರದಲ್ಲಿ ‌‌ಹೊಮೈ ತೀರಿಕೊಂಡರು.