ಭಾರತದ ಮಾಜಿ ಟೆಸ್ಟ್ ನಾಯಕ ಅಜಿತ್ ವಾಡೇಕರ್ ಇನ್ನಿಲ್ಲ

0
45

1971ರಲ್ಲಿ ಪ್ರಬಲ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ನೆಲದಲ್ಲಿ ಭಾರತಕ್ಕೆ ವಿಜಯದ ಪಾಠ ಕಲಿಸಿಕೊಟ್ಟಿರುವ ಮಾಜಿ ಟೆಸ್ಟ್ ನಾಯಕ ಅಜಿತ್ ವಾಡೇಕರ್ (77) ಆಗಸ್ಟ್ 15 ರ ಬುಧವಾರ ರಾತ್ರಿ ನಿಧರರಾದರು.

ಹೊಸದಿಲ್ಲಿ: 1971ರಲ್ಲಿ ಪ್ರಬಲ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ನೆಲದಲ್ಲಿ ಭಾರತಕ್ಕೆ ವಿಜಯದ ಪಾಠ ಕಲಿಸಿಕೊಟ್ಟಿರುವ ಮಾಜಿ ಟೆಸ್ಟ್ ನಾಯಕ ಅಜಿತ್ ವಾಡೇಕರ್ (77) ಆಗಸ್ಟ್ 15 ರ  ಬುಧವಾರ ರಾತ್ರಿ ನಿಧರರಾದರು. 

ಮುಂಬಯಿನ ಜಸ್ಲೋಕ್ ಆಸ್ಪತ್ರೆಯಲ್ಲಿ ವಾಡೇಕರ್ ಕೊನೆಯುಸಿರೆಳೆದರು. ಅಜಿತ್ ವಾಡೇಕರ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಪತ್ನಿ ರೇಖಾ ಹಾಗೂ ಮೂವರು ಮಕ್ಕಳನ್ನು ವಾಡೇಕರ್ ಹೊಂದಿದ್ದಾರೆ. ಅಂತ್ಯ ಸಂಸ್ಕಾರವು ಶುಕ್ರವಾರದಂದು ನಡೆಯಲಿದೆ. 

1966ರಿಂದ 1974ರ ವರೆಗೆ ವಾಡೇಕರ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ‘ಆಕ್ರಮಣಕಾರಿ ಬ್ಯಾಟ್ಸ್‌ಮನ್‌’ ಎಂದೇ ಪ್ರಸಿದ್ಧಿ ಪಡೆದಿರುವ ವಾಡೇಕರ್ 1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿಯುತ್ತಿದ್ದ ಎಡಗೈ ಬ್ಯಾಟ್ಸ್‌ಮನ್ ವಾಡೇಕರ್ ಸ್ಲಿಪ್‌ ಕ್ಷೇತ್ರರಕ್ಷಣೆಯಲ್ಲಿ ನಿಸ್ಸೀಮರಾಗಿದ್ದರು. ಅವರ ನಾಯಕತ್ವದಲ್ಲೇ 1971ರಲ್ಲಿ ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ದ ಅವರದ್ದೇ ನೆಲದಲ್ಲಿ ಟೆಸ್ಟ್ ಸರಣಿ ಗೆಲುವನ್ನು ದಾಖಲಿಸಿತ್ತು. 

ವಾಡೇಕರ್ ಸಾಧನೆಯನ್ನು ಗುರುತಿಸಿದ ಭಾರತೀಯ ಸರಕಾರವು 1967ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1972ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿತ್ತು. 

ಟೆಸ್ಟ್: ಪಂದ್ಯ: 37, ರನ್: 2113, ಸರಾಸರಿ: 31.07, ಶತಕ: 1, ಅರ್ಧಶತಕ: 14, ಕ್ಯಾಚ್: 46
ಏಕದಿನ: ಪಂದ್ಯ: 2, ರನ್: 73, ಸರಾಸರಿ: 36.50, ಅರ್ಧಶತಕ: 1, ಕ್ಯಾಚ್: 1

ಮೊದಲ ಟೆಸ್ಟ್: ಮುಂಬಯಿನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ, 1966 ಡಿಸೆಂಬರ್ 13-18
ಕೊನೆಯ ಟೆಸ್ಟ್: ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ, 1974 ಜುಲೈ 4-8