ಭಾರತದ ಬಾಕ್ಸಿಂಗ್ ಫೆಡರೇಷನ್‌ ನಿಂದ ಅರ್ಜುನ ಪ್ರಶಸ್ತಿಗೆ ಅಮಿತ್‌, ಗೌರವ್ ಹೆಸರು ಶಿಫಾರಸು

0
26

ಅರ್ಜುನ ಪ್ರಶಸ್ತಿಗೆ ಅಮಿತ್‌ ಪಂಘಾಲ್ ಮತ್ತು ಗೌರವ್ ಬಿಧುರಿ ಹೆಸರನ್ನು ಭಾರತದ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಶಿಫಾರಸು ಮಾಡಿದೆ.

ನವದೆಹಲಿ (ಪಿಟಿಐ): ಅರ್ಜುನ ಪ್ರಶಸ್ತಿಗೆ ಅಮಿತ್‌ ಪಂಘಾಲ್ ಮತ್ತು ಗೌರವ್ ಬಿಧುರಿ ಹೆಸರನ್ನು  ಭಾರತದ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಶಿಫಾರಸು ಮಾಡಿದೆ.  

ಏಪ್ರೀಲ್ 30 ರ ಮಂಗಳವಾರ ನಡೆದ ಫೆಡರೇಷನ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಾಕ್ಸಿಂಗ್ ಕ್ರೀಡಾಪಟುಗಳ ಸಾಧನೆ :   ಅಮಿತ್‌ ಪಂಘಾಲ್‌ ಅವರು ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಉಜ್ಬೇಕಿಸ್ತಾನದ ವಿಶ್ವಚಾಂಪಿಯನ್‌ ಹಸನ್‌ಬಾಯ್‌ ದುಸ್ಮಾತೋವ್‌ ಅವರನ್ನು ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನ 52 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಇನ್ನೊಬ್ಬ ಬಾಕ್ಸರ್‌ ಗೌರವ್ ಬಿಧುರಿ 2017ರಲ್ಲಿ ಹ್ಯಾಂಬರ್ಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 

ಎರಡು ವರ್ಷಗಳಲ್ಲಿ ಪಂಘಾಲ್‌ ಮತ್ತು ಬಿಧುರಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದು, ಅರ್ಜುನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.  

ತಮ್ಮ ವೃತ್ತಿ ಬದುಕಿನಲ್ಲಿ ಏರಿಳಿತ ಕಂಡಿದ್ದ ಅಮಿತ್‌ ಪಂಘಾಲ್, 2012ರಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಚಿಕನ್‌ ಗುನ್ಯಾದಿಂದ ಬಳಲುತ್ತಿದ್ದಾಗ ಆಕಸ್ಮಿಕವಾಗಿ ಉದ್ದೀಪನಾ ಅಂಶಗಳಿರುವ ಔಷಧವನ್ನು ತೆಗೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಆಯ್ಕೆ ಸಮಿತಿಯು ಅವರನ್ನು ಪ್ರಶಸ್ತಿಗೆ ಪರಿಗಣಿಸಿರಲಿಲ್ಲ. ಇದೀಗ ಅಮಿತ್‌ ಎಲ್ಲವನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಅವರು ‍ಪ್ರಶಸ್ತಿಗೆ ಅರ್ಹರು ಎಂದು ಫೆಡರೇಷನ್‌ ಹೇಳಿದೆ.  

ದ್ರೋಣಾಚಾರ್ಯ ಪ್ರಶಸ್ತಿಗೆ ಯಾರ ಹೆಸರು ಶಿಫಾರಸ್ಸು :  ದ್ರೋಣಾಚಾರ್ಯ ಪ್ರಶಸ್ತಿಗೆ ಕೋಚ್‌ಗಳಾದ ಸಂಧ್ಯಾ ಗುರುಂಗ್ ಮತ್ತು ಶಿವ ಸಿಂಗ್‌ ಅವರ ಹೆಸರನ್ನು ಫೆಡರೇಷನ್‌ ಸೂಚಿಸಿದೆ.