ಭಾರತದ ಧ್ವಜ ಹಿಡಿದು ನೃತ್ಯ ಮಾಡಿಸಿದ್ದಕ್ಕೆ ಶಾಲೆ ನೋಂದಣಿ ಅಮಾನತು : ಪಾಕಿಸ್ತಾನ ಸರ್ಕಾರದ ಕ್ರಮ

0
1063

ಭಾರತದ ತ್ರಿವರ್ಣ ಧ್ವಜ ಹಿಡಿದು ಭಾರತೀಯ ಸಂಸ್ಕೃತಿ ಸಾರುವ ಹಾಡಿಗೆ ಮಕ್ಕಳಿಂದ ನೃತ್ಯ ಮಾಡಿಸಿದ್ದ ಶಾಲೆಯ ನೋಂದಣಿಯನ್ನು ಪಾಕಿಸ್ತಾನ ಸರ್ಕಾರ ಅಮಾನತುಗೊಳಿಸಿದೆ.

ಕರಾಚಿ(ಪಿಟಿಐ): ಭಾರತದ ತ್ರಿವರ್ಣ ಧ್ವಜ ಹಿಡಿದು ಭಾರತೀಯ ಸಂಸ್ಕೃತಿ ಸಾರುವ ಹಾಡಿಗೆ ಮಕ್ಕಳಿಂದ ನೃತ್ಯ ಮಾಡಿಸಿದ್ದ ಶಾಲೆಯ ನೋಂದಣಿಯನ್ನು ಪಾಕಿಸ್ತಾನ ಸರ್ಕಾರ ಅಮಾನತುಗೊಳಿಸಿದೆ.

ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ಮತ್ತು ಪಾಕಿಸ್ತಾನದ ‘ರಾಷ್ಟ್ರೀಯ ಘನತೆ’ಗೆ ಧಕ್ಕೆ ತಂದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

‘ಮಾಮಾ ಬೇಬಿ ಕೇರ್ ಕೇಂಬ್ರಿಜ್ ಸ್ಕೂಲ್’ ಮಾಲೀಕರಿಗೆ ಬುಧವಾರ ಶೋಕಾಸ್ ನೋಟಿಸ್ ನೀಡಲಾಗಿದ್ದು, ಸಿಂಧ್ ಖಾಸಗಿ ಸಂಸ್ಥೆಗಳ ತಪಾಸಣೆ ಮತ್ತು ನೋಂದಣಿ ನಿರ್ದೇಶನಾಲಯದ(ಡಿಐಆರ್‌ಪಿಐಎಸ್‌) ಮುಂದೆ ಹಾಜರಾಗಲು ತಿಳಿಸಲಾಗಿದೆ.

ವಾರದ ಹಿಂದೆಯೇ ಈ ನೃತ್ಯ ಪ್ರದರ್ಶನ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಜಾಲತಾಣಗಳಲ್ಲಿ ಜನರಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ ಎಂದು ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ.‌

‘ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದು ಪಾಕಿಸ್ತಾನದ ಘನತೆಗೆ ವಿರುದ್ಧವಾದ ಕೆಲಸ. ಇದನ್ನು ಯಾವುದೇ ಸಂದರ್ಭದಲ್ಲಿ ಸಹಿಸಲು ಆಗುವುದಿಲ್ಲ’  ಎಂದು ಡಿಐಆರ್‌ಪಿಐಎಸ್‌ರಿಜಿಸ್ಟ್ರಾರ್ ರಫಿಯಾ ಜಾವೆದ್ ಪ್ರತಿಪಾದಿಸಿದ್ದಾರೆ.

ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಶಾಲೆಯ ಮಾಲೀಕರಿಗೆ ತಿಳಿಸಲಾಗಿದೆ. ನೀಡದಿದ್ದರೆ ಶಾಲೆಯ ನೋಂದಣಿ ರದ್ದಾಗಲಿದೆ ಎಂದು ಜಾವೆದ್ ಹೇಳಿದ್ದಾರೆ.

ಶಾಲೆಯ ಉಪಪ್ರಾಂಶುಪಾಲರಾದ ಫಾತಿಮಾ ಪ್ರತಿಕ್ರಿಯಿಸಿದ್ದು, ‘ಬೇರೆ–ಬೇರೆ ದೇಶಗಳ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಇರಲಿ ಎಂಬ ಕಾರಣಕ್ಕೆ ಶಾಲೆಯ ಆಡಳಿತ ಮಂಡಳಿ ಈ ಕಾರ್ಯಕ್ರಮ ಆಯೋಜಿಸಿತ್ತು’ ಎಂದಿದ್ದಾರೆ.

‘ಸೌದಿ ಅರೇಬಿಯಾ, ಅಮೆರಿಕ, ಈಜಿಪ್ಟ್, ಪಾಕಿಸ್ತಾನ, ಭಾರತ ಸೇರಿ ಹಲವು ದೇಶಗಳ ಸಂಸ್ಕೃತಿ ಸಾರುವ ನೃತ್ಯವನ್ನು ಮಕ್ಕಳು  ಪ್ರಸ್ತುತಪಡಿಸಿದರು. ಆದರೆ, ಕೆಲವು ವರದಿಗಾರರು ಇದನ್ನು ತಿರುಚಿದ್ದು, ಶಾಲೆಯನ್ನು ಗುರಿಯಾಗಿಸಿ ನೃತ್ಯದ ನಿರ್ದಿಷ್ಟ ಭಾಗವನ್ನು ಮಾತ್ರ ಬಿತ್ತರಿಸಿದ್ದಾರೆ’ ಎಂದು ದೂರಿದ್ದಾರೆ.