ಭಾರತದಲ್ಲಿ ಪಾಕ್‌ ಹೈಕಮಿಷನರ್ ಆಗಿ “ಮೊಯಿನ್–ಉಲ್‌–ಹಕ್‌” ನೇಮಕ

0
52

ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸುವ ಸಂಬಂಧ ಪಾಕಿಸ್ತಾನವು ಮೊಯಿನ್–ಉಲ್‌–ಹಕ್‌ ಅವರನ್ನು ಭಾರತಕ್ಕೆ ನೂತನ ಹೈಕಮಿಷನರ್ ಆಗಿ ನೇಮಕ ಮಾಡಿದೆ.

ಇಸ್ಲಾಮಾಬಾದ್ (ಪಿಟಿಐ): ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸುವ ಸಂಬಂಧ ಪಾಕಿಸ್ತಾನವು ಮೊಯಿನ್–ಉಲ್‌–ಹಕ್‌ ಅವರನ್ನು ಭಾರತಕ್ಕೆ ನೂತನ ಹೈಕಮಿಷನರ್ ಆಗಿ ನೇಮಕ ಮಾಡಿದೆ.

ಭಾರತ, ಚೀನಾ ಹಾಗೂ ಜಪಾನ್‌ ಸೇರಿದಂತೆ 12ಕ್ಕೂ ಅಧಿಕ ದೇಶಗಳಿಗೆ ರಾಯಭಾರಿಗಳ ನೇಮಕಕ್ಕೆ ಪ್ರಧಾನಿ ಇಮ್ರಾನ್‌ ಖಾನ್‌ ಮೇ 20 ರ ಸೋಮವಾರವಷ್ಟೇ ಅಂಕಿತ ಹಾಕಿದ್ದಾರೆ.

ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಜೆಇಎಂ ಉಗ್ರನಿಂದ ಆತ್ಮಾಹುತಿ ಬಾಂಬ್‌ ದಾಳಿ ನಡೆದು, 40 ಜನ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈಗ ಲೋಕಸಭಾ ಚುನಾವಣೆ ಮುಗಿದು, ಭಾರತದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಹೀಗಾಗಿ ಪಾಕಿಸ್ತಾನದ ಈ ಕ್ರಮಕ್ಕೆ ಮಹತ್ವ ಬಂದಿದೆ. 

ಈ ಮೊದಲು ಭಾರತದಲ್ಲಿ ಪಾಕಿಸ್ತಾನ ಹೈಕಮಿಷನರ್‌ ಆಗಿದ್ದ ಸೊಹೇಲ್‌ ಮೆಹಮೂದ್‌ ಅವರನ್ನು ಕಳೆದ ಏಪ್ರಿಲ್‌ನಲ್ಲಿ ನೂತನ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ನಂತರ ಆ ಹುದ್ದೆಗೆ ನೇಮಕವಾಗಿರಲಿಲ್ಲ.
 
ಮೊಯಿನ್‌–ಉಲ್‌–ಹಕ್‌ ಪ್ರಸ್ತುತ ಫ್ರಾನ್ಸ್‌ನಲ್ಲಿ ರಾಯಭಾರಿಯಾಗಿದ್ದಾರೆ. ಟರ್ಕಿ, ಕೆನಡಾ ಹಾಗೂ ಶ್ರೀಲಂಕಾದಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು, ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಶಿಷ್ಟಾಚಾರ ವಿಭಾಗದ  ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.