ಭಾರತಕ್ಕೆ 1.61 ಲಕ್ಷ ಕೋಟಿ ರೂ. ಎಫ್​ಡಿಐ : ವಿಶ್ವಸಂಸ್ಥೆ ವರದಿ

0
244

ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2018ರ ಮೊದಲಾರ್ಧದಲ್ಲಿ 1.61 ಲಕ್ಷ ಕೋಟಿ ರೂ. ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹೂಡಿಕೆ ಭಾರತಕ್ಕೆ ಹರಿದುಬಂದಿದೆ.

ನವದೆಹಲಿ: ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2018ರ ಮೊದಲಾರ್ಧದಲ್ಲಿ 1.61 ಲಕ್ಷ ಕೋಟಿ ರೂ. ವಿದೇಶಿ ನೇರ ಬಂಡವಾಳ (ಎಫ್​ಡಿಐ)  ಹೂಡಿಕೆ ಭಾರತಕ್ಕೆ ಹರಿದುಬಂದಿದೆ. ಈ ಮೂಲಕ ದಕ್ಷಿಣ ಏಷ್ಯಾಕ್ಕೆ ಹರಿದುಬಂದ ಒಟ್ಟಾರೆ ಎಫ್​ಡಿಐನಲ್ಲಿ ಶೇ.13 ಭಾರತಕ್ಕೆ ಸಿಕ್ಕಿದೆ. ಪರಿಣಾಮ ಜಾಗತಿಕವಾಗಿ ಟಾಪ್-10 ಪಟ್ಟಿಯಲ್ಲಿ ಭಾರತ ಸ್ಥಾನ ಗಳಿಸಿದೆ.

ಚೀನಾ ಮೊದಲ ಸ್ಥಾನ ಗಳಿಸಿದ್ದು 5.41 ಲಕ್ಷ ಕೋಟಿ ರೂ. ಎಫ್​ಡಿಐ ಪಡೆದಿದೆ. ಎರಡನೇ ಸ್ಥಾನದಲ್ಲಿ ಬ್ರಿಟನ್ 4.81 ಲಕ್ಷ ಕೋಟಿ ರೂ., ನಂತರದ ಸ್ಥಾನಗಳಲ್ಲಿ ಅಮೆರಿಕ (3.41 ಲಕ್ಷ ಕೋಟಿ ರೂ.), ನೆದರ್​ಲೆಂಡ್( 3.27 ಲಕ್ಷ ಕೋಟಿ ರೂ.) ಆಸ್ಟ್ರೇಲಿಯಾ (2.65 ಲಕ್ಷ ಕೋಟಿ ರೂ.), ಸಿಂಗಾಪುರ (2.55 ಲಕ್ಷ ಕೋಟಿ ರೂ.), ಬ್ರೆಜಿಲ್ (1.87 ಲಕ್ಷ ಕೋಟಿ ರೂ.) ವಿದೇಶಿ ನೇರ ಬಂಡವಾಳ ಗಳಿಸಿವೆ. ಆದರೆ ಜಾಗತಿಕವಾಗಿ ಎಫ್​ಡಿಐನಲ್ಲಿ ಶೇ.41 ಕುಸಿತವಾಗಿದೆ. ವರ್ಷಾಂತ್ಯದವರೆಗೂ ಕುಸಿತ ಮುಂದುವರಿಯುವ ಸಾಧ್ಯತೆಯಿದೆ.

ಜಾಗತಿಕ ಆರ್ಥಿಕತೆಗೆ ಮಬ್ಬು: ಅಮೆರಿಕ-ಚೀನಾ ವಾಣಿಜ್ಯ ಸಮರ, ಇತರ ಕಾರಣಗಳಿಂದ ಜಾಗತಿಕ ಆರ್ಥಿಕತೆಗೆ ಮಬ್ಬು ಹಿಡಿದಿದೆ. ಗ್ರೀನ್​ಫೀಲ್ಡ್ ಯೋಜನೆಗಳು ಮಾತ್ರ ಅಭಿವೃದ್ಧಿ ದಾರಿಯಲ್ಲಿವೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಎಚ್ಚರಿಸಲಾಗಿದೆ.

ಚೀನಾದ ಗೌಪ್ಯ ಸಾಲ 424 ಲಕ್ಷ ಕೋಟಿ ರೂ.!

ಚೀನಾದ ಸ್ಥಳೀಯ ಸರ್ಕಾರಗಳು 424 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲ ಹೊಂದಿವೆ, ಇದನ್ನು ಗೌಪ್ಯವಾಗಿಡಲಾಗಿದೆ ಎಂದು ಎಸ್ ಆಂಡ್ ಪಿ ಸಂಸ್ಥೆ ವರದಿ ಮಾಡಿದೆ. ಹಿಮಗಡ್ಡೆಯ ಹತ್ತಿರ ಟೈಟಾನಿಕ್ ಹಡಗು ಹೋಗುತ್ತಿರುವ ರೀತಿಯಲ್ಲಿ ಚೀನಾ ಸಾಲದ ಹೊರೆ ಬೆಳೆಯುತ್ತಿದೆ. ದೇಶದ ಆರ್ಥಿಕ ಪ್ರಗತಿ ಕುಸಿತವಾಗುತ್ತಿರುವ ಬೆನ್ನಲ್ಲೇ ಈ ಗೌಪ್ಯ ಸಾಲ ಆತಂಕ ಸೃಷ್ಟಿಸಿದೆ ಎಂದು ಕಂಪನಿ ಹೇಳಿದೆ. ಏತನ್ಮಧ್ಯೆ ಚೀನಾ ಅಧಿಕೃತವಾಗಿ 317 ಲಕ್ಷ ಕೋಟಿ ರೂ. ಸಾಲದ ಹೊಂದಿರುವುದಾಗಿ ಘೋಷಿಸಿದೆ.

ಭಾರತಕ್ಕೆ ಎಚ್ಚರಿಕೆ

ಇ-ಕಾಮರ್ಸ್ ಹಾಗೂ ಡಿಜಿಟಲ್ ವ್ಯವಹಾರಗಳ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕಿದ್ದು, ಸಂಬಂಧಿತ ಕಂಪನಿಗಳ ಓಲೈಕೆಗೆ ಮಣಿಯಬಾರದು. ಯಾವುದೇ ಕಾರಣಕ್ಕೂ ದೇಶದ ಗಡಿ ದಾಟಿ ಪ್ರಜೆಗಳ ಖಾಸಗಿ ಮಾಹಿತಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಭಾರತ ವಿಶೇಷ ಡಿಜಿಟಲ್ ನೀತಿ ಹೊಂದುವ ಅಗತ್ಯವಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.