ಭಾರತಕ್ಕೆ ನೇಪಾಳ ರಾಯಭಾರಿ ನೀಲಾಂಬರ್‌ ಆಚಾರ್ಯ

0
706

ಭಾರತಕ್ಕೆ ನೇಪಾಳ ರಾಯಭಾರಿಯಾಗಿ ಮಾಜಿ ಕಾನೂನು ಸಚಿವ ನೀಲಾಂಬರ್‌ ಆಚಾರ್ಯ ಅವರನ್ನು ನೇಮಿಸಲಾಗಿದೆ.

ಕಠ್ಮಂಡು (ಪಿಟಿಐ): ಭಾರತಕ್ಕೆ ನೇಪಾಳ ರಾಯಭಾರಿಯಾಗಿ ಮಾಜಿ ಕಾನೂನು ಸಚಿವ ನೀಲಾಂಬರ್‌ ಆಚಾರ್ಯ ಅವರನ್ನು ನೇಮಿಸಲಾಗಿದೆ.

ಈ ಹಿಂದಿನ ರಾಯಭಾರಿಯಾಗಿದ್ದ ದೀಪ್‌ ಕುಮಾರ್‌ ಉಪಾಧ್ಯಾಯ ಅವರು 2017ರ ಅಕ್ಟೋಬರ್‌ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಈ ಸ್ಥಾನ ಖಾಲಿ ಉಳಿದಿತ್ತು.

ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಆಚಾರ್ಯ ಅವರು, ಎಡಪಂಥೀಯ ಚಿಂತಕರಾಗಿ ಗುರುತಿಸಿಕೊಂಡಿದ್ದರು. ತದನಂತರ, ನೇಪಾಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

1990ರ ಮಧ್ಯಂತರ ಸರ್ಕಾರದಲ್ಲಿ ಕಾನೂನು, ಸಂಸದೀಯ ವ್ಯವಹಾರ, ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ನೀಲಾಂಬರ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನೇಪಾಳ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ಪ್ರಕಾರ, ಇದೇ ಮೊದಲ ಬಾರಿಗೆ ನೇಪಾಳದ ರಾಯಭಾರಿ ರಾಷ್ಟ್ರಪತಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಯಭಾರಿಗಳಿಗೆ ಈ ಹಿಂದೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಪ್ರತಿಜ್ಞಾವಿಧಿ ಬೋಧಿಸುತ್ತಿದ್ದರು.