ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದ ರದ್ದು : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಿಂದ ಪ್ರಕಟ

0
595

ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ರದ್ದು ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ.

ವಾಷಿಂಗ್ಟನ್‌ / ನವದೆಹಲಿ (ಪಿಟಿಐ): ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ರದ್ದು ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ.

‘ತನ್ನ ಮಾರುಕಟ್ಟೆ ಪ್ರವೇಶಿಸಲು ಅಮೆರಿಕೆಗೆ ಭಾರತವು ಸಮಾನ ಮತ್ತು ಸಮಂಜಸವಾದ ಅವಕಾಶ ನೀಡದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹೇಳಿದ್ದಾರೆ.

ಕೆಲ ಸರಕುಗಳ ಆಮದು ಮೇಲಿನ ಸುಂಕ ವಿನಾಯ್ತಿ ರದ್ದುಪಡಿಸುವ ಅಮೆರಿಕದ ನಿರ್ಧಾರವು, ಅಮೆರಿಕೆ ಜತೆಗಿನ ರಫ್ತು ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಭಾರತ ಪ್ರತಿಕ್ರಿಯಿಸಿದೆ.

ಭಾರತದ ವಿರುದ್ಧ ಟ್ರಂ‍ಪ್‌ ಟೀಕೆ: ಅಮೆರಿಕದ ಜತೆ ನ್ಯಾಯೋಚಿತವಲ್ಲದ ವಾಣಿಜ್ಯ ಬಾಂಧವ್ಯ ಹೊಂದಿಲ್ಲದ ದೇಶಗಳ ವಿರುದ್ಧ ಟ್ರಂಪ್‌ ಆಡಳಿತ ಕೈಗೊಳ್ಳುತ್ತಿರುವ ನಿರ್ಧಾರಗಳ ಪೈಕಿ ಇದೂ ಒಂದಾಗಿದೆ. ಭಾರತವು ಅಮೆರಿಕದ ಸರಕು
ಗಳಿಗೆ ಗರಿಷ್ಠ ಪ್ರಮಾಣದಲ್ಲಿ ಸುಂಕಗಳನ್ನು ವಿಧಿಸುತ್ತಿದೆ ಎಂದು ಟ್ರಂಪ್‌ ಪದೇ, ಪದೇ ಹೇಳುತ್ತಲೇ ಬಂದಿದ್ದಾರೆ. ಅಮೆರಿಕದ ವ್ಯಾಪಾರ ಕೊರತೆ ತಗ್ಗಿಸಲು ತಾವು ಬದ್ಧವಾಗಿರುವುದಾಗಿಯೂ ಅವರು ಹೇಳಿಕೊಳ್ಳುತ್ತಿದ್ದಾರೆ.

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ನಿಯಮಗಳಿಂದ ವಿನಾಯ್ತಿ ನೀಡುವ ಆದ್ಯತಾ ಸುಂಕ ವ್ಯವಸ್ಥೆಯನ್ನು ಭಾರತ ಮತ್ತು ಟರ್ಕಿಗೆ ಅನ್ವಯಿಸುವಂತೆ ರದ್ದು ಮಾಡುವ ತಮ್ಮ ಉದ್ದೇಶವನ್ನು ಟ್ರಂಪ್‌ ಅವರು ಕಾಂಗ್ರೆಸ್‌ ಗಮನಕ್ಕೆ ತಂದಿದ್ದಾರೆ.

ಅಮೆರಿಕದ ಆದ್ಯತಾ ಸುಂಕ ವ್ಯವಸ್ಥೆಯ ಪ್ರಯೋಜನಕ್ಕೆ ಅರ್ಹತೆ ಪಡೆದ ದೇಶಗಳ ವಾಹನ ಬಿಡಿಭಾಗ ಮತ್ತು ಜವಳಿ ಉತ್ಪನ್ನಗಳು ಸೇರಿದಂತೆ 2 ಸಾವಿರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸಲಾಗುತ್ತಿಲ್ಲ.

ಇದರ ಪ್ರಯೋಜನ ಪಡೆದುಕೊಳ್ಳುವ ದೇಶಗಳಲ್ಲಿ ಭಾರತವೂ ಒಂದಾಗಿದೆ. 2017ರಲ್ಲಿ ಭಾರತದ 39,900 ಕೋಟಿ ಮೊತ್ತದ ಸರಕುಗಳ ರಫ್ತು ವಹಿವಾಟು, ಸುಂಕರಹಿತ ಸೌಲಭ್ಯದ ಪ್ರಯೋಜನ ಪಡೆದುಕೊಂಡಿತ್ತು.

ತಕ್ಷಣವೇ ಈ ನಿರ್ಧಾರ ಜಾರಿಗೆ ಬರುವುದಿಲ್ಲ. ಅಧಿಸೂಚನೆ ಹೊರಡಿಸಿದ ಎರಡು ತಿಂಗಳ ನಂತರ ಜಾರಿಗೆ ಬರಲಿದೆ.

ರಫ್ತಿನ ಮೇಲೆ ಗಮನಾರ್ಹ ಪ್ರಭಾವ ಇಲ್ಲ

‘ಅಮೆರಿಕವು ಆದ್ಯತಾ ಸುಂಕ ವ್ಯವಸ್ಥೆ ಕೈಬಿಡುವುದರಿಂದ ಭಾರತದ ರಫ್ತಿನ ಮೇಲೆ ಗಮನಾರ್ಹ ಪರಿಣಾಮ ಕಂಡುಬರುವುದಿಲ್ಲ’ ಎಂದು ವಾಣಿಜ್ಯ ಕಾರ್ಯದರ್ಶಿ ಅನುಪ್‌ ವಾಧ್ವಾನ್‌ ಪ್ರತಿಕ್ರಿಯಿಸಿದ್ದಾರೆ.

ಆದ್ಯತಾ ಸುಂಕ ವ್ಯವಸ್ಥೆಯಡಿ ಭಾರತವು 39,200 ಕೋಟಿ ಮೊತ್ತದ ರಫ್ತು ವಹಿವಾಟು ನಡೆಸಿದ್ದರೂ ವಾರ್ಷಿಕ ಸುಂಕ ಪ್ರಯೋಜನವು 1,330 ಕೋಟಿಗಳಷ್ಟು ಮಾತ್ರ ಇದೆ. ಭಾರತವು ಅಮೆರಿಕೆಗೆ ಪ್ರಮುಖವಾಗಿ ಕಚ್ಚಾ ಸರಕು ಮತ್ತು ಸಾವಯವ ರಾಸಾಯನಿಕಗಳನ್ನು ರಫ್ತು ಮಾಡುತ್ತಿದೆ.