ಭಾರತಕ್ಕೆ ನಿರ್ಬಂಧ: ಶೀಘ್ರ ನಿರ್ಣಯ ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿಕೆ

0
566

ರಷ್ಯಾ ಜತೆಗಿನ ಒಪ್ಪಂದದ ಸಂಬಂಧ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಕುರಿತು ಶೀಘ್ರವೇ ನಿರ್ಧಾರ ಹೊರಬೀಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್ (ಪಿಟಿಐ): ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಕುರಿತು ಶೀಘ್ರವೇ ನಿರ್ಧಾರ ಹೊರಬೀಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಎಸ್‌–400 ಟ್ರಯಂಫ್ ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ ಖರೀದಿಸಲು ರಷ್ಯಾ ಜತೆಗೆ ಭಾರತ ಕಳೆದ ವಾರ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 

ಅಮೆರಿಕ ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧ ವಿಧಿಸಲು ಕಾಟ್ಸಾ (CAATSA–Countering America’s Adversaries Through Sanctions Act) ಕಾನೂನು ರೂಪಿಸಿಕೊಂಡಿದೆ. 

 ಈ ವರ್ಷಾರಂಭದಲ್ಲಿ ಕಾಟ್ಸಾಗೆ ತಿದ್ದುಪಡಿ ಮಾಡಲಾಗಿದೆ. ಇದರ ಅನ್ವಯ, ರಷ್ಯಾ ಜತೆಗೆ ಒಪ್ಪಂದ ಮಾಡಿ
ಕೊಂಡಿರುವ ಭಾರತದ ಮೇಲೆ ನಿರ್ಬಂಧ ವಿಧಿಸುವ ನಿರ್ಣಯ ಕೈಗೊಳ್ಳುವ ಹಕ್ಕಿರುವುದು ಟ್ರಂಪ್‌ಗೆ ಮಾತ್ರ. 

‘ಕಾಟ್ಸಾ ಒತ್ತಡ ಇಲ್ಲ’: ಭಾರತ–ರಷ್ಯಾದ ರಕ್ಷಣಾ ಒಪ್ಪಂದಗಳ ಮೇಲೆ ‘ಕಾಟ್ಸಾ’ ಒತ್ತಡ ಉಂಟುಮಾಡುವುದಿಲ್ಲ ಎಂದು ಭಾರತಕ್ಕೆ ರಷ್ಯಾ ರಾಯಭಾರಿ ಆಗಿರುವ ನಿಕೊಲಾಯ್ ಕುದಶೆವ್ ಗುರುವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ. 

‘ಮುಂದಿನ ತಿಂಗಳುಗಳಲ್ಲಿ ಭಾರತ–ರಷ್ಯಾ ನಡುವೆ ಇನ್ನೂ ಹೆಚ್ಚಿನ ಒಪ್ಪಂದಗಳನ್ನು ನಿರೀಕ್ಷಿಸಬಹುದು. ಅಮೆರಿಕದ ನಿರ್ಬಂಧದಿಂದ ಅವುಗಳಿಗೆ ಅಡ್ಡಿಯಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.