ಭಾರತಕ್ಕೆ ಇರಾನ್‌ ತೈಲ ಸದ್ಯಕ್ಕೆ ಅಬಾಧಿತ

0
199

ಇರಾನ್‌ ಮೇಲಿನ ಅಮೆರಿಕದ ಆರ್ಥಿಕ ನಿರ್ಬಂಧ ಜಾರಿಗೆ ಬಂದರೂ, ಸದ್ಯದ ಮಟ್ಟಿಗೆ ಭಾರತಕ್ಕೆ ಕಚ್ಚಾತೈಲ ಆಮದು ಮಾಡಿಕೊಳ್ಳಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ವಾಷಿಂಗ್ಟನ್‌ (ಪಿಟಿಐ): ಇರಾನ್‌ ಮೇಲಿನ ಅಮೆರಿಕದ ಆರ್ಥಿಕ ನಿರ್ಬಂಧ ಜಾರಿಗೆ ಬಂದರೂ, ಸದ್ಯದ ಮಟ್ಟಿಗೆ ಭಾರತಕ್ಕೆ ಕಚ್ಚಾತೈಲ ಆಮದು ಮಾಡಿಕೊಳ್ಳಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಅಮೆರಿಕವು ಇರಾನ್‌ ಮೇಲೆ ಮತ್ತೆ ನವೆಂಬರ್ 5 ರ ಸೋಮವಾರದಿಂದ  ನಿರ್ಬಂಧ ಜಾರಿಗೊಳಿಸಲಿದೆ. ಆದರೆ, 8 ದೇಶಗಳಿಗೆ ತಾತ್ಕಾಲಿಕವಾಗಿ ತೈಲ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ. ವಿನಾಯ್ತಿಗೆ ಒಳಪಡುವ ದೇಶಗಳ ಹೆಸರನ್ನು ಸೋಮವಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಇರಾನ್‌ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಮತ್ತು ಚೀನಾ ಮುಂಚೂಣಿಯಲ್ಲಿವೆ. ಹೀಗಾಗಿ ಭಾರತವೂ ವಿನಾಯ್ತಿ ಪ‍ಟ್ಟಿಯಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

‘ಹಂತ ಹಂತವಾಗಿ ಆಮದನ್ನು ಸಂಪೂರ್ಣವಾಗಿ ತಗ್ಗಿಸಬೇಕು ಎನ್ನುವ ಒಪ್ಪಂದದೊಂದಿಗೆ ವಿನಾಯ್ತಿ ನೀಡಲಾಗುವುದು. ಎರಡು ರಾಷ್ಟ್ರಗಳು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಿವೆ. ಇನ್ನುಳಿದ ಆರು ರಾಷ್ಟ್ರಗಳು ಆಮದು ಪ್ರಮಾಣವನ್ನು ಕ್ರಮೇಣ ತಗ್ಗಿಸಲಿವೆ’ ಎಂದೂ ಅವರು ತಿಳಿಸಿದ್ದಾರೆ.

ನವೆಂಬರ್ 5 ರಿಂದ ಜಾರಿಗೆ ಬರಲಿರುವ ಆರ್ಥಿಕ ನಿರ್ಬಂಧವು ಅತ್ಯಂತ ಕಠಿಣವಾಗಿರಲಿದೆ. 
ಇದರಿಂದ ಇರಾನ್‌ ಅತಿ ಹೆಚ್ಚಿನ ಸಂಕಷ್ಟ ಎದುರಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ.

ಅಮೆರಿಕ ನಿರ್ಧಾರ: ಪ್ರಧಾನ್‌ ಸ್ವಾಗತ

ನವದೆಹಲಿ (ಪಿಟಿಐ): ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ತಾತ್ಕಾಲಿಕ ಒಪ್ಪಿಗೆ ನೀಡಿರುವ ಅಮೆರಿಕದ ನಿರ್ಧಾರವನ್ನು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ವಾಗತಿಸಿದ್ದಾರೆ.

‘ತೈಲ ಬಳಕೆ ರಾಷ್ಟ್ರಗಳ ಹಿತಾಸಕ್ತಿಯನ್ನು ಅಮೆರಿಕ ಎತ್ತಿಹಿಡಿದಿದೆ’ ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ‘ತೈಲ ಬಳಕೆ ದೇಶಗಳ ಹಿತಾಸಕ್ತಿ ರಕ್ಷಣೆ’ ಕುರಿತಾದ ಚಳವಳಿಗೆ ಅಮೆರಿಕ ಮನ್ನಣೆ ನೀಡಿದೆ. ಇದರಿಂದಾಗಿ ತೈಲ ಆಮದು ಮಾಡಿಕೊಳ್ಳುತ್ತಿರುವ ಬೇರೆ ರಾಷ್ಟ್ರಗಳಿಗೂ ಅನುಕೂಲವಾಗಲಿದೆ’ ಎಂದಿದ್ದಾರೆ.