ಭರತ್ ಗೋಯೆಂಕಾ ಅವರಿಗೆ ಸರ್‌ ಎಂ.ವಿ ಪ್ರಶಸ್ತಿ

0
24

ಈ ಬಾರಿಯ ಸರ್‌ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಟ್ಯಾಲಿ ಸಲ್ಯೂಷನ್ಸ್‌ ಸಂಸ್ಥೆಯ ಸಹ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಭರತ್ ಗೋಯೆಂಕಾ ಅವರನ್ನು ಆಯ್ಕೆ ಮಾಡಲಾಗಿದೆ.

ಉದ್ದಿಮೆ ಮತ್ತು ವಹಿವಾಟು ರಂಗಕ್ಕೆ ನೀಡಿದ ವಿಶಿಷ್ಟ ಕೊಡುಗೆ ಗುರುತಿಸಿ ಟ್ಯಾಲಿ ಸಲ್ಯೂಷನ್ಸ್‌ ಸಂಸ್ಥೆಯ ಸಹ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಭರತ್ ಗೋಯೆಂಕಾ ಅವರನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಈ ಬಾರಿಯ ಸರ್‌ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ನಗರದಲ್ಲಿ ಇದೇ 15ರಂದು ನಡೆಯಲಿರುವ ‘ಎಫ್‌ಕೆಸಿಸಿಐ’ ಸಂಸ್ಥಾಪನಾ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಕೆ.ರವಿ ಅವರು ತಿಳಿಸಿದರು.

‘ಭರತ್ ಗೋಯೆಂಕಾ ಅವರ ಸಂಸ್ಥೆಯು ವಹಿವಾಟು ನಿರ್ವಹಣಾ ಸಾಫ್ಟ್‌ವೇರ್‍ನಲ್ಲಿ ಮುಂಚೂಣಿಯಲ್ಲಿದೆ. 100ಕ್ಕೂ ಹೆಚ್ಚು ದೇಶಗಳ 10 ಲಕ್ಷಕ್ಕೂ ಹೆಚ್ಚು ವಹಿವಾಟುದಾರರಿಗೆ ಸರಳ ರೂಪದ ಸಾಫ್ಟ್‌ವೇರ್‍ ಒದಗಿಸಿದೆ’ ಎಂದು ತಿಳಿಸಿದರು.

ಸಿಡ್ನಿಯಲ್ಲಿ ಸಮಾವೇಶ:- ’ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇದೇ 19ರಿಂದ 21ರವರೆಗೆ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿಷ್ಠಿತ ಸಮಾವೇಶದಲ್ಲಿ ‘ಎಫ್‌ಕೆಸಿಸಿಐ’ ಮೊದಲ ಬಾರಿಗೆ ಭಾಗವಹಿಸಲಿದೆ. ವಿಶ್ವದಲ್ಲಿ ನಮ್ಮ ರಾಷ್ಟ್ರ ಅತ್ಯಂತ ತ್ವರಿತ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿರುವ ಕುರಿತು ಸಮಾವೇಶದಲ್ಲಿ ಪ್ರಬಂಧ ಮಂಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ಮೊಬೈಲ್‌ ಆ್ಯಪ್‌:- ‘ಶತಮಾನ ಪೂರೈಸಿರುವ ಎಫ್‌ಕೆಸಿಸಿಐ, ಡಿಜಿಟಲ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದೆ. ಒಕ್ಕೂಟದ ಎಲ್ಲ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಸದಸ್ಯರಿಗೆ ಒದಗಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಎಸ್‌ಟಿ ಉತ್ತೇಜನಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದರು.

‘ಒಕ್ಕೂಟದ ಅತ್ಯಾಧುನಿಕ ಶತಮಾನೋತ್ಸವ ಕಟ್ಟಡದಲ್ಲಿ ಶ್ರೇಷ್ಠತಾ ಕೇಂದ್ರ ಆರಂಭಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಭಾರತೀಯ ವಿದೇಶ ವ್ಯಾಪಾರ ಸಂಸ್ಥೆ ಮತ್ತು ಎಂಎಸ್‍ಎಂಇ ಸಚಿವಾಲಯದ ಸಹಯೋಗದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುವುದು. ‘ಬೆಂಗಳೂರಿನಲ್ಲಿ ಕೌಶಲಾಭಿವೃದ್ಧಿ ಸಂಸ್ಥೆ ಸ್ಥಾಪಿಸಲಾಗುವುದು. ಇದಕ್ಕೆ ದಾಬಸ್‍ಪೇಟೆ ಕೈಗಾರಿಕಾ ವಲಯದಲ್ಲಿ ಶೇ 50ರ ರಿಯಾಯ್ತಿ ದರದಲ್ಲಿ ಒಂದೂವರೆ ಎಕರೆ ಮಂಜೂರಾಗಿದೆ’ ಎಂದು ತಿಳಿಸಿದರು.