ಭಯೋತ್ಪಾದಕ ಸಂಘಟನೆಗೆ ಹಣದ ಹರಿವು ತಡೆಯಲು ವಿಫಲ: ಪಾಕ್​ ಅನ್ನು ಕಪ್ಪುಪಟ್ಟಿಗೆ ಸೇರಿಸಿದ ಎಪಿಜಿ

0
30

ತನ್ನ ನೆಲವನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡಿರುವ ಉಗ್ರರು ಮತ್ತು ಅವರ ಭಯೋತ್ಪಾದನಾ ಸಂಘಟನೆಗಳಿಗೆ ಹರಿದು ಬರುತ್ತಿರುವ ಆರ್ಥಿಕ ನೆರವನ್ನು ತಡೆಗಟ್ಟಲು ಹಾಗೂ ಅಕ್ರಮ ನಗದು ವಹಿವಾಟಿಗೆ ಕಡಿವಾಣ ಹಾಕಲು ವಿಫಲವಾಗಿರುವ ಪಾಕಿಸ್ತಾನವನ್ನು ಏಷ್ಯಾ ಪೆಸಿಫಿಕ್​ ಗುಂಪು (ಎಪಿಜಿ) ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿದೆ.

ನವದೆಹಲಿ: ತನ್ನ ನೆಲವನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡಿರುವ ಉಗ್ರರು ಮತ್ತು ಅವರ ಭಯೋತ್ಪಾದನಾ ಸಂಘಟನೆಗಳಿಗೆ ಹರಿದು ಬರುತ್ತಿರುವ ಆರ್ಥಿಕ ನೆರವನ್ನು ತಡೆಗಟ್ಟಲು ಹಾಗೂ ಅಕ್ರಮ ನಗದು ವಹಿವಾಟಿಗೆ ಕಡಿವಾಣ ಹಾಕಲು ವಿಫಲವಾಗಿರುವ ಪಾಕಿಸ್ತಾನವನ್ನು ಏಷ್ಯಾ ಪೆಸಿಫಿಕ್​ ಗುಂಪು (ಎಪಿಜಿ) ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಇದುವರೆಗೂ ಬೂದು ಪಟ್ಟಿಯಲ್ಲಿರುವ ಪಾಕ್​ ಅನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಎಪಿಜಿ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಕ್ಯಾನ್​ಬೆರಾದಲ್ಲಿ ನಡೆಯುತ್ತಿರುವ ಎಪಿಜಿಯ ವಾರ್ಷಿಕ ಸಭೆಯಲ್ಲಿ ಶುಕ್ರವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಕ್ಯಾನ್​ಬೆರಾ ಸಭೆಯಲ್ಲಿ ಎಪಿಜಿಯು ಪಾಕ್​ ಸಲ್ಲಿಸಿರುವ ಪರಸ್ಪರ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಭಯೋತ್ಪಾದನಾ ಸಂಘಟನೆಗಳಿಗೆ ಆರ್ಥಿಕ ನೆರವು ತಡೆಗಟ್ಟುವುದು ಹಾಗೂ ಅಕ್ರಮ ನಗದು ವಹಿವಾಟು ಸೇರಿ ಒಟ್ಟು 11 ಅಂಶಗಳ ಕುರಿತು ಪರಿಶೀಲನೆ ನಡೆಸಿತು. ಈ 11 ಅಂಶಗಳ ಪೈಕಿ 10 ಅಂಶಗಳಲ್ಲಿನ ಪಾಕ್​ ನಿರ್ವಹಣೆ ಪರಿಣಾಮಕಾರಿಯಾಗಿಲ್ಲ ಎಂದು ಸಭೆ ತೀರ್ಮಾನಿಸಿತ್ತು. ಆರ್ಥಿಕ ಕಾರ್ಯಪಡೆಯ (ಎಫ್​ಎಟಿಎಫ್​) ಪ್ರಾದೇಶಿಕ ಮಾನ್ಯತೆ ಹೊಂದಿರುವ ಕಾರಣ ಎಪಿಜಿಯು ತೆಗೆದುಕೊಳ್ಳುವ ನಿರ್ಧಾರಗಳು ಪಾಕ್​ನ ಭವಿಷ್ಯದ ಮೇಲೆ ಘೋರ ಪರಿಣಾಮಗಳನ್ನು ಉಂಟು ಮಾಡುವದು ನಿಶ್ಚಿತವಾಗಿದೆ.

ಎಪಿಜಿಯಲ್ಲಿನ ಈ ಬೆಳವಣಿಗೆಯನ್ನು ಗಮನಿಸಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮಿರದಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಜಾಗತಿಕ ಬೆಂಬಲ ಪಡೆದುಕೊಳ್ಳುವ ರಾಜತಾಂತ್ರಿಕ ಪ್ರಯತ್ನದಲ್ಲಿರುವ ಪಾಕಿಸ್ತಾನಕ್ಕೆ ಮತ್ತಷ್ಟು ಹಿನ್ನಡೆಯಾಗಿರುವುದು ಬಹುತೇಕ ಖಚಿತ. (ಏಜೆನ್ಸೀಸ್​)