ಬ್ರಿಟಿಷ್ ಹೆರಾಲ್ಡ್ ಓದುಗರ ಸಮೀಕ್ಷೆ ಪ್ರಕಟ : ಮೋದಿ ಜಗತ್ತಿನ ಪ್ರಬಲ ನಾಯಕ

0
47

ಬ್ರಿಟನ್ ನಿಯತಕಾಲಿಕೆ ‘ಬ್ರಿಟಿಷ್ ಹೆರಾಲ್ಡ್’ನ ಓದುಗರು ನರೇಂದ್ರ ಮೋದಿಯನ್ನು ವಿಶ್ವದ ಅತ್ಯಂತ ಬಲಿಷ್ಠ ನಾಯಕ- 2019 ಎಂದು ಆಯ್ಕೆ ಮಾಡಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿ ಯಾರು ಎಂಬ ವಿಷಯದ ಮೇಲೆ ‘ಬ್ರಿಟಿಷ್ ಹೆರಾಲ್ಡ್’ ಓದುಗರ ಅಭಿಪ್ರಾಯ ಕೋರಿತ್ತು. ಮೋದಿ ಶೇ. 30.9 ಮತಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.

ಲಂಡನ್: ಬ್ರಿಟನ್ ನಿಯತಕಾಲಿಕೆ ‘ಬ್ರಿಟಿಷ್ ಹೆರಾಲ್ಡ್’ನ ಓದುಗರು ನರೇಂದ್ರ ಮೋದಿಯನ್ನು ವಿಶ್ವದ ಅತ್ಯಂತ ಬಲಿಷ್ಠ ನಾಯಕ- 2019 ಎಂದು ಆಯ್ಕೆ ಮಾಡಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿ ಯಾರು ಎಂಬ ವಿಷಯದ ಮೇಲೆ ‘ಬ್ರಿಟಿಷ್ ಹೆರಾಲ್ಡ್’ ಓದುಗರ ಅಭಿಪ್ರಾಯ ಕೋರಿತ್ತು. ಮೋದಿ ಶೇ. 30.9 ಮತಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ (ಶೇ. 29.9) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಶೇ. 21.9), ಚೀನಾದ ಅಧ್ಯಕ್ಷ ಕ್ಸಿ ಚಿನ್​ಪಿಂಗ್ (ಶೇ. 18.1) ಅವರನ್ನು ಮೋದಿ ಹಿಂದಿಕ್ಕಿದ್ದಾರೆ. ಈ ಸ್ಪರ್ಧೆಗೆ ಜಾಗತಿಕ ಮಟ್ಟದ 25ಕ್ಕೂ ಹೆಚ್ಚು ನಾಯಕರನ್ನು ನಿಯತಕಾಲಿಕೆ ಸೂಚಿಸಿತ್ತು. ಈ ಪೈಕಿ ನಾಲ್ವರು ನಾಯಕರು ಅಂತಿಮ ಸುತ್ತಿಗೆ ಆಯ್ಕೆಯಾದರು. ಪ್ರಧಾನಿ ನರೇಂದ್ರ ಮೋದಿಯನ್ನು ‘ನಮೋ’ ಎಂದು ಸ್ಪರ್ಧಾ ಕಣದಲ್ಲಿ ಉಲ್ಲೇಖಿಸಲಾಗಿತ್ತು.

ಆನ್​ಲೈನ್ ಮೂಲಕ ಓದುಗರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಒಬ್ಬ ಓದುಗನಿಗೆ ಒಂದು ಮತಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ಒಮ್ಮೆ ಬಳಸುವ ಪಾಸ್​ವರ್ಡ್ ಗಳನ್ನು ರವಾನಿಸಲಾಗಿತ್ತು. ಇದನ್ನು ಬಳಸಿಕೊಂಡು ನಿಯತ ಕಾಲಿಕೆಯ ವೆಬ್​ಸೈಟ್​ನಲ್ಲಿ ಓದು ಗರು ತಮ್ಮ ಆಯ್ಕೆ ದಾಖಲಿಸಬೇಕಿತ್ತು. ಓದುಗರ ಸ್ಪಂದನೆ ನಿರೀಕ್ಷೆಗೂ ಮೀರಿ ವ್ಯಕ್ತವಾಯಿತು. ಒಂದು ವಾರದಲ್ಲಿ 3 ಲಕ್ಷ ಅಭಿಪ್ರಾಯ ವ್ಯಕ್ತವಾದವು ಎಂದು ‘ಬ್ರಿಟಷ್ ಹೆರಾಲ್ಡ್’ ತಿಳಿಸಿದೆ.

ನಮೋ ನಾಮನಿರ್ದೇಶನ ಏಕೆ?

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿದ ವರ್ಚಸ್ವಿ ನಾಯಕ. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ವಿವಿಧ ದೇಶಗಳಿಗೆ ಭೇಟಿ ನೀಡಿ, ಸ್ನೇಹ ಸಂಪಾದಿಸಿದರು. ಅವರ ವಿದೇಶಾಂಗ ನೀತಿಗಳನ್ನು ಹಲವು ರಾಷ್ಟ್ರಗಳ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಕುರಿತ ಮೋದಿ ಕಳಕಳಿ, ಉಗ್ರವಾದದ ವಿರುದ್ಧ ಕಠಿಣ ಹೋರಾಟ ಸರ್ವರಿಂದ ಮಾನ್ಯ ಪಡೆದ ಅಂಶಗಳು. ‘ಆಕ್ಟ್ ಈಸ್ಟ್’ ನೀತಿಯ ಮೂಲಕ ಏಷ್ಯಾದಲ್ಲೂ ಮೋದಿ ಜನಪ್ರಿಯ ನಾಯಕ. ಭಾರತದಲ್ಲಿ ಅನೇಕ ವಿಶಿಷ್ಟ ಯೋಜನೆಗಳನ್ನು ಘೋಷಿಸುವ ಮೂಲಕ ಜನಕಲ್ಯಾಣಕ್ಕೆ ಒತ್ತು ನೀಡಿದ ಧೀಮಂತ ನಾಯಕ. ಹೀಗಾಗಿ ಮೋದಿ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು ಎಂದು ‘ಬ್ರಿಟಿಷ್ ಹೆರಾಲ್ಡ್’ ನಿಯತಕಾಲಿಕೆ ಹೇಳಿದೆ. ಇತ್ತೀಚೆಗೆ ನಡೆದ ಭಾರತ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಮತ್ತೊಂದು ಅವಧಿಗೆ ಪ್ರಧಾನಿಯಾಗಿರುವ ಮೋದಿ ಕುರಿತು ‘ಬ್ರಿಟಿಷ್ ಹೆರಾಲ್ಡ್’ ಪತ್ರಿಕೆ ಮುಖಪುಟ ಲೇಖನ ಪ್ರಕಟಿಸಿದೆ.