ಬ್ರಿಟನ್ ಟೆನಿಸ್ ತಾರೆ ಆಂಡಿ ಮರ್ರೆ ಶಾಕಿಂಗ್ ವಿದಾಯ

0
562

ತೀವ್ರತರ ಸೊಂಟ ನೋವಿನಿಂದ ಬಳಲುತ್ತಿರುವ ಬ್ರಿಟನ್ ತಾರೆ ಆಂಡಿ ಮರ್ರೆ ಈ ವರ್ಷವೇ ವಿದಾಯ ಹೇಳುವ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರ ಆರಂಭಗೊಳ್ಳಲಿರುವ ಆಸ್ಟ್ರೇಲಿಯನ್ ಓಪನ್, 14 ವರ್ಷಗಳ ವೃತ್ತಿಜೀವನದ ಕೊನೆಯ ಟೂರ್ನಿ ಆಗಬಹುದು ಎಂದು 31 ವರ್ಷದ ಮರ್ರೆ ಹೇಳಿಕೊಂಡಿದ್ದಾರೆ.

ಮೆಲ್ಬೋರ್ನ್: ತೀವ್ರತರ ಸೊಂಟ ನೋವಿನಿಂದ ಬಳಲುತ್ತಿರುವ ಬ್ರಿಟನ್ ತಾರೆ ಆಂಡಿ ಮರ್ರೆ ಈ ವರ್ಷವೇ ವಿದಾಯ ಹೇಳುವ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. 2019 ಜನೇವರಿ 14 ರ ಸೋಮವಾರ ಆರಂಭಗೊಳ್ಳಲಿರುವ ಆಸ್ಟ್ರೇಲಿಯನ್ ಓಪನ್, 14 ವರ್ಷಗಳ ವೃತ್ತಿಜೀವನದ ಕೊನೆಯ ಟೂರ್ನಿ ಆಗಬಹುದು ಎಂದು 31 ವರ್ಷದ ಮರ್ರೆ ಹೇಳಿಕೊಂಡಿದ್ದಾರೆ.

ಮಾಜಿ ವಿಶ್ವ ನಂ. 1 ಹಾಗೂ 3 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯನಾಗಿರುವ ಮರ್ರೆ, ಮೆಲ್ಬೋರ್ನ್​ನಲ್ಲಿ ಜನೇವರಿ 11 ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಪ್ರಕಟಿಸುವ ವೇಳೆ ದುಃಖ ತಡೆಯಲಾಗದೆ ಕಣ್ಣೀರಿಟ್ಟರು. ‘ಸೊಂಟನೋವು ಅಸಹನೀಯವಾಗಿದೆ. ನನ್ನ ಮಿತಿಯೊಳಗೆ ಮಾತ್ರ ಆಡಬಹುದಾಗಿದೆ. ಈ ಮಿತಿ ಮತ್ತು ನೋವು ನನಗೆ ನನ್ನ ಆಟ ಅಥವಾ ತರಬೇತಿಯನ್ನು ಆನಂದಿಸಲು ಬಿಡುತ್ತಿಲ್ಲ’ ಎಂದು ಭಾವುಕರಾಗಿ ನುಡಿದರು.

ತವರಿನ ವಿಂಬಲ್ಡನ್​ನಲ್ಲಿ ಆಡುವ ಮೂಲಕ ವಿದಾಯ ಹೇಳಬೇಕೆಂಬುದು ಮರ್ರೆ ಆಸೆಯಾಗಿದ್ದರೂ, ಅದು ಸಾಧ್ಯವಾಗದೆ ಹೋಗಬಹುದು ಎಂದು ಬೇಸರಿಸಿದ್ದಾರೆ. ಇದೇ ನೋವಿನಲ್ಲಿ ಇನ್ನೂ 4-5 ತಿಂಗಳು ಆಡುವುದು ಕಷ್ಟ ಎಂದಿದ್ದಾರೆ. ಫೆಡರರ್, ನಡಾಲ್, ಜೋಕೊವಿಕ್ ಒಳಗೊಂಡ ಟೆನಿಸ್ ಸುವರ್ಣ ಯುಗದಲ್ಲಿ ಅವರು, 77 ವರ್ಷಗಳ ಬಳಿಕ ವಿಂಬಲ್ಡನ್ ಗೆದ್ದ ಬ್ರಿಟನ್ ಆಟಗಾರ ಎಂಬ ಸಾಧನೆ ಮಾಡಿರುವುದು ವಿಶೇಷ. –ಏಜೆನ್ಸೀಸ್