ಬ್ಯಾಟಿಂಗ್​ನಲ್ಲಿ ಸಚಿನ್​ ತೆಂಡುಲ್ಕರ್​ ದಾಖಲೆಯೊಂದನ್ನು ಸರಿಗಟ್ಟಿದ ಕಿವೀಸ್​ ಬೌಲರ್​ “ಟಿಮ್​ ಸೌಥಿ”

0
18

ನ್ಯೂಜಿಲೆಂಡ್​ ತಂಡದ ವೇಗದ ಬೌಲರ್​ ಟಿಮ್​ ಸೌಥಿ ಸಚಿನ್​ ತೆಂಡುಲ್ಕರ್​ ದಾಖಲೆಯನ್ನು ಸರಿಗಟ್ಟುವ ಮೂಲಕ ಸುದ್ದಿಯಾಗಿದ್ದಾರೆ.

ಗಾಲೆ: ಭಾರತ ತಂಡದ ಮಾಜಿ ಆಟಗಾರ ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿರುವ ಹಲವು ದಾಖಲೆಗಳನ್ನು ಇದುವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್​ ತಂಡದ ವೇಗದ ಬೌಲರ್​ ಟಿಮ್​ ಸೌಥಿ ಸಚಿನ್​ ತೆಂಡುಲ್ಕರ್​ ದಾಖಲೆಯನ್ನು ಸರಿಗಟ್ಟುವ ಮೂಲಕ ಸುದ್ದಿಯಾಗಿದ್ದಾರೆ.

ಶ್ರೀಲಂಕಾದ ಗಾಲೆಯಲ್ಲಿ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೌಥಿ ಈ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್​ ತಂಡದ ಮೊದಲ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಸಹಿತ 14 ರನ್​ ಗಳಿಸಿದರು. ಈ ಮೂಲಕ ಸೌಥಿ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸರ್​ ಸಿಡಿಸಿ ಸಚಿನ್​ ದಾಖಲೆಯನ್ನು ಸರಿಗಟ್ಟಿದ್ದಾರೆ. ಸೌಥಿ 89 ಇನಿಂಗ್ಸ್​ಗಳಲ್ಲಿ 69 ಸಿಕ್ಸರ್​ ಸಿಡಿಸಿದ್ದರೆ, ಸಚಿನ್​ 329 ಇನಿಂಗ್ಸ್​ಗಳಲ್ಲಿ 69 ಸಿಕ್ಸರ್​ ಸಿಡಿಸಿದ್ದರು. ಈ ಮೂಲಕ ಸೌಥಿ ಮತ್ತು ಸಚಿನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ 17ನೇ ಸ್ಥಾನ ಪಡೆದಿದ್ದಾರೆ.

ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಸೌಥಿ ಬೌಲಿಂಗ್​ನೊಂದಿಗೆ ಬ್ಯಾಟಿಂಗ್​ನಲ್ಲೂ ಮಿಂಚುಹರಿಸಿದ್ದಾರೆ. ನ್ಯೂಜಿಲೆಂಡ್​ ತಂಡದ ಮಾಜಿ ಆಟಗಾರ ಬ್ರೆಂಡೆನ್​ ಮೆಕ್ಕಲಂ 176 ಇನಿಂಗ್ಸ್​ಗಳಲ್ಲಿ 107 ಸಿಕ್ಸರ್​ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್​ ಗಿಲ್​ಕ್ರಿಸ್ಟ್​ 137 ಇನಿಂಗ್ಸ್​ಗಳಲ್ಲಿ 100 ಸಿಕ್ಸರ್​ ಸಿಡಿಸಿದ್ದಾರೆ. ಇವರ ನಂತರದಲ್ಲಿ ಕ್ರಿಸ್​ ಗೇಲ್​ (98), ಜಾಕ್​ ಕಾಲಿಸ್​ (97) ಮತ್ತು ವೀರೇಂದ್ರ ಸೆಹ್ವಾಗ್​ (91) ಸ್ಥಾನ ಪಡೆದಿದ್ದಾರೆ.