ಬ್ಯಾಂಕಿಂಗ್‌ ವಂಚನೆ ಮೊತ್ತ 71,500 ಕೋಟಿಗೆ ಏರಿಕೆ

0
20

ದೇಶದಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವರದಿಯಿಂದ ತಿಳಿದುಬಂದಿದೆ.

ನವದೆಹಲಿ (ಪಿಟಿಐ): ದೇಶದಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವರದಿಯಿಂದ ತಿಳಿದುಬಂದಿದೆ.

2018–19ರಲ್ಲಿ ಬ್ಯಾಂಕಿಂಗ್‌ ವಂಚನೆ ಮೊತ್ತದಲ್ಲಿ ಶೇ 73ರಷ್ಟು ಏರಿಕೆಯಾಗಿದ್ದು,  71,500 ಕೋಟಿಗೆ ತಲುಪಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗಿರುವ ಪ್ರಶ್ನೆಗೆ ಆರ್‌ಬಿಐ ಪ್ರತಿಕ್ರಿಯೆ ನೀಡಿದೆ.

11 ಹಣಕಾಸು ವರ್ಷಗಳಲ್ಲಿ 53,334 ಪ್ರಕರಣಗಳಲ್ಲಿ ಒಟ್ಟಾರೆ  2.05 ಲಕ್ಷ ಕೋಟಿ ಮೊತ್ತದ ವಂಚನೆ ನಡೆದಿದೆ.

‘ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆಗಳ ಬಗ್ಗೆ ತನಿಖಾ ಸಂಸ್ಥೆಗಳಿಗೆ ದೂರು ನೀಡಬೇಕು. ವಂಚನೆ ವಿರುದ್ಧ ತೆಗೆದು
ಕೊಂಡಿರುವ ಅಥವಾ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ’ ಎಂದು ಆರ್‌ಬಿಐ ತಿಳಿಸಿದೆ.

ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರನ್ನೂ ಒಳಗೊಂಡು ಭಾರಿ ಮೊತ್ತದ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರೂ ದೇಶಬಿಟ್ಟು ಓಡಿಹೋಗಿದ್ದಾರೆ.

ವಂಚನೆಯ ವರ್ಗೀಕರಣ: ಕೇಂದ್ರೀಯ ವಿಚಕ್ಷಣ ಆಯೋಗವು (ಸಿವಿಸಿ), ವಂಚನೆಯ ಪ್ರಕರಣಗಳನ್ನು 13 ರೀತಿಯಲ್ಲಿ  ವರ್ಗೀಕರಣ ಮಾಡಿದೆ. ಹರಳು ಮತ್ತು ಚಿನ್ನಾಭರಣ, ತಯಾರಿಕೆ ಮತ್ತು ಕೈಗಾರಿಕೆ, ಕೃಷಿ, ಮಾಧ್ಯಮ, ವಿಮಾನಯಾನ, ರಫ್ತು, ಬೇಡಿಕೆ ಸಾಲ, ಸಾಲಕ್ಕೆ ಖಾತರಿ ಮತ್ತು ಚೆಕ್‌ ಡಿಸ್ಕೌಂಟ್‌…ಇತ್ಯಾದಿ.