ಬೇಡವೆಂದರೂ ಹಿಂಬಾಲಿಸಿಕೊಂಡು ಬರುತ್ತೆ ಗೂಗಲ್‌!

0
41

ನಿಮ್ಮ ಅನುಮತಿ ಇರಲಿ, ಬಿಡಲಿ. ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿರುವ ಗೂಗಲ್‌ ಆ್ಯಪ್‌ನ ಸ್ಥಳ ಗುರುತಿಸುವ ಲೊಕೇಶನ್‌ ಆಕ್ಸೆಸ್‌ ಅನ್ನು ಸ್ವಿಚ್‌ ಆಫ್‌ ಮಾಡಿದರೂ ಸಹ ಗೂಗಲ್‌ ನಿಮ್ಮ ಸ್ಥಳವನ್ನು ಟ್ರಾಕ್‌ ಮಾಡುತ್ತಲೇ ಇರುತ್ತದೆ!

ಸ್ಯಾನ್‌ಫ್ರಾನ್ಸಿಸ್ಕೊ: ನಿಮ್ಮ ಅನುಮತಿ ಇರಲಿ, ಬಿಡಲಿ. ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿರುವ ಗೂಗಲ್‌ ಆ್ಯಪ್‌ನ ಸ್ಥಳ ಗುರುತಿಸುವ ಲೊಕೇಶನ್‌ ಆಕ್ಸೆಸ್‌ ಅನ್ನು ಸ್ವಿಚ್‌ ಆಫ್‌ ಮಾಡಿದರೂ ಸಹ ಗೂಗಲ್‌ ನಿಮ್ಮ ಸ್ಥಳವನ್ನು ಟ್ರಾಕ್‌ ಮಾಡುತ್ತಲೇ ಇರುತ್ತದೆ! 

ಆಂಡ್ರಾಯ್ಡ್‌ ಅಥವಾ ಐಫೋನ್‌ಗಳಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಫ್‌ ಮಾಡಿದರೆ, ನಿಮ್ಮ ಚಲನವಲನದ ಮಾಹಿತಿ ದಾಖಲಾಗುವುದಿಲ್ಲ, ಎಂಬ ಸಂದೇಶವೇನೋ ಫೋನ್‌ನ ಪರದೆ ಮೇಲೆ ಮೂಡುತ್ತದೆ. ವಾಸ್ತವದಲ್ಲಿ ಅದು ನಿಜವಲ್ಲ. ನಿಮ್ಮ ಹೆಜ್ಜೆಹೆಜ್ಜೆಯೂ ಗೂಗಲ್‌ನ ಸರ್ವರ್‌ನಲ್ಲಿ ದಾಖಲಾಗಿರುತ್ತದೆ ಎನ್ನುವುದನ್ನು ಅಸೋಸಿಯೇಟೆಡ್‌ ಪ್ರೆಸ್‌ ಸುದ್ದಿಸಂಸ್ಥೆ ನಡೆಸಿದ ವೈಜ್ಞಾನಿಕ ತನಿಖೆ ಕಂಡುಕೊಂಡಿದೆ. ಪ್ರಿನ್ಸಟನ್‌ನ ಕಂಪ್ಯೂಟರ್‌ ವಿಜ್ಞಾನಿಗಳೂ ಇದನ್ನು ದೃಢಪಡಿಸಿದ್ದಾರೆ. 

ಜಗತ್ತಿನಾದ್ಯಂತ ಗೂಗಲ್‌ ಮ್ಯಾಪ್ಸ್‌ ಬಳಸುವ ಲಕ್ಷಾಂತರ ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರ ವೈಯಕ್ತಿಕ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತಿದೆ. ಬಳಕೆದಾರರ ಅನುಮತಿ ಇಲ್ಲದೇ ಅವರು ಸಂಚರಿಸುವ ಸ್ಥಳದ ಮಾಹಿತಿಯನ್ನು ಸಂಗ್ರಹಿಸುವುದು ತಪ್ಪು ಎಂದು ಕಂಪ್ಯೂಟರ್‌ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಗೂಗಲ್‌ ಮ್ಯಾಪ್ಸ್ ತರಹದ ಗೂಗಲ್‌ ಆ್ಯಪ್‌ಗಳು, ಸಂಚಾರ ಮಾರ್ಗದರ್ಶಿಯಾಗಿ ನೀವು ನ್ಯಾವಿಗೇಟ್‌ ಮಾಡಲು ಪ್ರಯತ್ನಿಸಿದರೆ ಲೊಕೇಶನ್‌ ಆಕ್ಸೆಸ್‌ ಬಳಸಲು ಅನುಮತಿ ಕೋರುತ್ತದೆ. ನೀವು ಬಳಸಲು ಅನುಮತಿಸಿದರೆ, ನಿಮ್ಮ ದಿನನಿತ್ಯದ ಚಲನೆಯನ್ನು ಸೂಚಿಸುವ ಟೈಮ್‌ಲೈನ್‌ನ ಹಿಸ್ಟರಿಯಲ್ಲಿ ಅದನ್ನು ಗೂಗಲ್‌ ಮ್ಯಾಫ್ಸ್‌ ಪ್ರದರ್ಶಿಸುತ್ತದೆ. ನಿಮ್ಮ ಪ್ರತಿ ನಿತ್ಯದ ಸಂಚಾರದ ಮಾಹಿತಿ ಸಂಗ್ರಹಿಸುವುದು ವೈಯಕ್ತಿಕ ಗೌಪ್ಯತೆಯ ಅಪಾಯ ಉಂಟು ಮಾಡಬಹುದು. ಇದರಿಂದ ಆಗುವ ಅನುಕೂಲ ಎಂದರೆ ಅಪರಾಧಿಗಳ ಪತ್ತೆಗೆ ಪೊಲೀಸರಿಗೆ ನೆರವಾಗುತ್ತದೆ ಎನ್ನುವುದು. 

ಟೈಮ್‌ಲೈನ್‌ನಿಂದ ಪಾರು: 
ಒಂದು ವೇಳೆ ನೀವು ‘ವೆಬ್‌ ಅಂಡ್‌ ಆ್ಯಪ್‌ ಆಕ್ಟಿವಿಟಿ’ ಸ್ವಿಚ್‌ ಆನ್‌ ಮಾಡಿ, ‘ಲೊಕೇಶನ್‌ ಹಿಸ್ಟರಿ’ಯನ್ನು ಸ್ವಿಚ್‌ ಆಫ್‌ ಮಾಡಿದರೆ, ನಿಮ್ಮ ಸಂಚಾರ ಮಾಹಿತಿ ಕುರಿತು ಟೈಮ್‌ಲೈನ್‌ನಲ್ಲಿ ಸಂಗ್ರಹವಾಗುವುದಿಲ್ಲ. ಆದರೆ ಇದು ಗೂಗಲ್‌ನ ಇತರೆ ಲೊಕೇಶನ್‌ ಮಾರ್ಕರ್‌ಗಳಲ್ಲಿ ಸಂಗ್ರಹಣೆಯನ್ನು ನಿಲ್ಲಿಸುವುದಿಲ್ಲ. ನೀವು ಒಂದೊಂದಾಗಿ ಲೊಕೇಶನ್‌ ಮಾರ್ಕರ್‌ಗಳನ್ನು ಡಿಲೀಟ್‌ ಮಾಡಬಹುದು. ಇದು ತುಂಬ ತ್ರಾಸದಾಯಕ ಕೆಲಸ. 

ಸ್ಥಳ ಮಹಿಮೆ ಏನು?
 

ಬಳಕೆದಾರರ ಸ್ಥಳ ಸಂಗ್ರಹದಿಂದ ಗೂಗಲ್‌ಗೆ ಜಾಹೀರಾತು ಆದಾಯ ಹರಿದು ಬರುತ್ತದೆ. ಈ ಮಾಹಿತಿ ಆಧರಿಸಿ ಜಾಹೀರಾತುದಾರರು ಮಾರ್ಕೆಂಟಿಂಗ್‌ ಮಾಡುತ್ತಾರೆ. ಹೆಚ್ಚು ಡೇಟಾ ಎಂದರೆ ಹೆಚ್ಚು ಲಾಭ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಗೂಗಲ್‌ ಹೇಳುವುದೇನು? 
ನಿಮ್ಮ ಸ್ಥಳದ ಮಾಹಿತಿಯನ್ನು ಸಂಗ್ರಹಿಸದಂತೆ ನೀವು ತಡೆಯಬೇಕಾದರೆ ‘ವೆಬ್‌ ಅಂಡ್‌ ಆ್ಯಪ್‌ ಆಕ್ಟಿವಿಟಿ’ಗೆ ಹೋಗಿ, ಅಲ್ಲಿ ಸೆಟ್ಟಿಂಗ್ಸ್‌ ಬದಲಾಯಿಸಿ ಎಂದು ಗೂಗಲ್‌ ತಿಳಿಸಿದೆ. ಹೀಗೆ ಮಾಡುವುದರಿಂದ ಯಾವುದೇ ಚಟುವಟಿಕೆ ನಿಮ್ಮ ಖಾತೆಯಲ್ಲಿ ಸಂಗ್ರಹವಾಗುವುದಿಲ್ಲ ಎಂದು ತಿಳಿಸಿದೆಯಾದರೂ, ಸ್ಥಳದ ಮಾಹಿತಿ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.