ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ : ಸುನಿಲ್‌‌ ಚೆಟ್ರಿಗೆ ಎರಡು ಪ್ರಶಸ್ತಿ

0
22

ಗರಿಷ್ಠ ಗೋಲು ಗಳಿಸಿದ ಆಟಗಾರ ಪ್ರಶಸ್ತಿ ಸತತ ಐದನೇ ಬಾರಿ ಸುನಿಲ್ ಚೆಟ್ರಿ ಪಾಲಾಗಿದೆ.

ಬೆಂಗಳೂರು : ನಾಯಕ ಸುನಿಲ್ ಚೆಟ್ರಿ, ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ (ಬಿಎಫ್‌ಸಿ) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡು ಪ್ರಶಸ್ತಿಗಳೊಂದಿಗೆ ಸಂಭ್ರಮಿಸಿದರು. ಗರಿಷ್ಠ ಗೋಲು ದಾಖಲಿಸಿದ ಆಟಗಾರ ಮತ್ತು ವರ್ಷದ ಆಟಗಾರ ಪ್ರಶಸ್ತಿಗಳು ಅವರ ಪಾಲಾದವು. ಗರಿಷ್ಠ ಗೋಲು ಗಳಿಸಿದ ಆಟಗಾರ ಪ್ರಶಸ್ತಿ ಸತತ ಐದನೇ ಬಾರಿ ಅವರ ಪಾಲಾಗಿದೆ.

ಮೂರು ಟೂರ್ನಿಗಳಲ್ಲಿ ಚೆಟ್ರಿ ಒಟ್ಟು 24 ಗೋಲು ಗಳಿಸಿದ್ದಾರೆ. ಇನ್ನೊಬ್ಬ ಶ್ರೇಷ್ಠ ಆಟಗಾರ ಮಿಕು 20 ಗೋಲು ಗಳಿಸಿದ್ದಾರೆ. ಐಎಸ್‌ಎಲ್‌ನಲ್ಲಿ ಗೋವಾ ಎಫ್‌ಸಿ ತಂಡದ ಎದುರು ಫಟೋರ್ಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಗೋಲು ಗಳಿಸಿದ ಮಿಕು ವರ್ಷದ ಗೋಲು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಆನ್‌ಲೈನ್‌ನಲ್ಲಿ ಪ್ರೇಕ್ಷಕರು ದಾಖಲಿಸುವ ಮತದ ಆಧಾರದಲ್ಲಿ ನೀಡಲಾಗುವ ವರ್ಷದ ‍ಪ್ರೇಕ್ಷಕರ ಆಯ್ಕೆ ಪ್ರಶಸ್ತಿಗೆ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಆಯ್ಕೆಯಾದರು.

2018 ಮೇ 17 ರ ಗುರುವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಕ್ಲಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥ ಜಿಂದಾಲ್‌ ‘ಈ ವರ್ಷ ತಂಡ ಅತ್ಯುತ್ತಮ ಸಾಧನೆ ಮಾಡಿದೆ. ತಂಡದ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಅಭಿಪ್ರಾಯಪಟ್ಟರು.

ಕೋಚ್ ಆಲ್ಬರ್ಟ್‌ ರೋಕಾ ಮಾತನಾಡಿ ‘ಆಟಗಾರರು ಅಭಿನಂದನೆಗೆ ಅರ್ಹರು’ ಎಂದರು.