ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ “ಅಲೋಕ್‌ಕುಮಾರ್” ಅಧಿಕಾರ ಸ್ವೀಕಾರ

0
37

ಬೆಂಗಳೂರು ನಗರದ 32ನೇ ಪೊಲೀಸ್ ಕಮಿಷನರ್ ಆಗಿ ಅಲೋಕ್‌ಕುಮಾರ್ ಜೂನ್ 17 ರ ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು.

ಬೆಂಗಳೂರು: ನಗರದ 32ನೇ ಪೊಲೀಸ್ ಕಮಿಷನರ್ ಆಗಿ ಅಲೋಕ್‌ಕುಮಾರ್ ಜೂನ್ 17 ರ  ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಬ್ಯಾಟನ್ ನೀಡುವ ಮೂಲಕ ಅಲೋಕ್‌ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಅಲೋಕ್‌ಕುಮಾರ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

# ಬೆಂಗಳೂರಿನಲ್ಲೇ ಡಿಸಿಪಿಯಾಗಿ, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ನೀವು ಈಗ ಕಮಿಷನರ್ ಆಗಿದ್ದೀರಾ? ಹೊಸ ಜವಾಬ್ದಾರಿಯ ಬಗ್ಗೆ?

ಅಪರಾಧ ವಿಭಾಗದಲ್ಲಿ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದೆ. ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಸಂತೋಷವಾಗುತ್ತಿದೆ ಎನ್ನುವುದಕ್ಕಿಂತ ಸಾಕಷ್ಟು ಸವಾಲು ಹಾಗೂ ಸಮಸ್ಯೆಗಳು ನನ್ನ ಮುಂದಿವೆ.

ಅಪರಾಧ ಕ್ಷೇತ್ರದಲ್ಲಿ ನಗರದ ಗಂಭೀರ ಸಮಸ್ಯೆಗಳೇನು? ಅದರ ತಡೆಗೆ ನಿಮ್ಮ ಕ್ರಮವೇನು?

ಸಮಸ್ಯೆಗಳೇನು ಎಂದು ದಿಢೀರನೇ ಹೇಳಲಾಗದು. ಪೊಲೀಸ್ ಇಲಾಖೆಯಲ್ಲಿ ನಿತ್ಯವೂ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ನಿವಾರಿಸುತ್ತಲೇ ಹೋಗಬೇಕು.

# ವೈಟ್‌ ಕಾಲರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅವುಗಳ ತಡೆಗೆ ಏನು ಮಾಡುತ್ತೀರಿ?

ವೈಟ್‌ ಕಾಲರ್ ಅಪರಾಧ ಪ್ರಕರಣಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ. ಅದಕ್ಕೆ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳೂ ಇವೆ.

# ಆಂಬಿಡೆಂಟ್‌, ಐಎಂಎ ಸೇರಿದಂತೆ ಹಲವು ಕಂಪನಿಗಳು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿವೆ. ಇಂಥ ಕಂಪನಿಗಳ ನಿಗ್ರಹ ಹೇಗೆ?

ಇಂಥ ಕಂಪನಿಗಳಿಂದ ಇದುವರೆಗೆ 1.25 ಲಕ್ಷ ಮಂದಿ ವಂಚನೆಗೆ ಒಳಗಾಗಿದ್ದಾರೆ. ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ. ನೋಂದಣಿ ಮಾಡಿಕೊಟ್ಟ ಇಲಾಖೆಗಳೇ ಕ್ರಮ ಜರುಗಿಸಬೇಕು. ಜನರ ಹಿತದೃಷ್ಟಿಯಿಂದ ಇಂಥ ಕಂಪನಿಗಳಿಂದ ಎಚ್ಚರವಾಗಿರುವಂತೆ ಮಾತ್ರ ನಾನು ಜಾಗೃತಿ ಮೂಡಿಸಬಲ್ಲೆ. ಅಗತ್ಯಬಿದ್ದರೆ, ಕಾನೂನು ತಜ್ಞರ ನೆರವು ಪಡೆದು ಕಂಪನಿಗಳಿಗೆ ಲಗಾಮು ಹಾಕುತ್ತೇನೆ.

#  ‘ಐಎಂಎ ಕಂಪನಿ’ ವಂಚನೆ ಪ್ರಕರಣ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಹೆಚ್ಚು ಪ್ರತಿಕ್ರಿಯಿಸಲಾರೆ. ಆ ಕಂಪನಿಯ ಕಚೇರಿ ಮೇಲೆ ಮೂರು ತಿಂಗಳ ಹಿಂದೆಯೇ ದಾಳಿ ಮಾಡಲಾಗಿತ್ತು. ಕಂಪನಿಯಿಂದ ವಂಚನೆಗೀಡಾದವರು ಇದ್ದರೆ ದೂರು ನೀಡುವಂತೆ ಕೋರಲಾಗಿತ್ತು. ಯಾರೊಬ್ಬರೂ ದೂರು ನೀಡ
ಲಿಲ್ಲ. ಇಂಥ ಪ್ರಕರಣಗಳಲ್ಲಿ ಪೊಲೀಸರಿಗೆ ಜನರ ಸಹಕಾರವೂ ಬೇಕಾಗುತ್ತದೆ.

# ತಕ್ಷಣದ ಸವಾಲುಗಳೇನು?

ನಗರದಲ್ಲಿ ಭೂ ಒತ್ತುವರಿ, ಮೀಟರ್ ಬಡ್ಡಿ ಹಾಗೂ ಹಫ್ತಾ ವಸೂಲಿ ಜಾಸ್ತಿ ಆಗಿದೆ. ಅಂಥ ದಂಧೆಗಳನ್ನು ಬುಡಸಮೇತ ಮಟ್ಟಹಾಕಲು ಸದ್ಯದಲ್ಲೇ ಕಾರ್ಯಾಚರಣೆ ಶುರು ಮಾಡಲಿದ್ದೇನೆ. ಇಂಥ ದಂಧೆ ನಡೆಸುವವರು ಈಗಲೇ ಎಚ್ಚೆತ್ತುಕೊಂಡು ಬದಲಾದರೆ ಒಳ್ಳೆಯದು.

# ಠಾಣೆ ಮಟ್ಟದಲ್ಲಿ ಸುಧಾರಣಾ ತರಲು ಏನು ಮಾಡುವಿರಿ?

ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಮ್ಮದಾಗಬೇಕಾದರೆ, ಠಾಣೆಗಳಿಂದಲೇ ಬದಲಾವಣೆ ಆಗಬೇಕು. ಶಿಫಾರಸು  ಮಾಡಿಸಿಕೊಂಡು ಬರುವವರಿಗೆ ಮಾತ್ರ ಸೇವೆ ಎಂಬ ಸ್ಥಿತಿ ಇದೆ. ಬಡವರು ಹಾಗೂ ಸಾಮಾನ್ಯ ಜನಕ್ಕೂ ಸ್ಪಂದಿಸುವ ಕೆಲಸ ಆಗಬೇಕು. ಠಾಣೆಯಲ್ಲೇ ಪರಿಹಾರ ಸಿಗುವಂತಾಗಬೇಕು. ಯಾರೊಬ್ಬರೂ ಸಮಸ್ಯೆ ಹೇಳಿಕೊಂಡು ಕಮಿಷನರ್‌ ಕಚೇರಿಗೆ ಬರುವಂತಾಗಬಾರದು.

# ರೌಡಿಗಳ ವಿರುದ್ಧ ನಿಮ್ಮ ಕಾರ್ಯಾಚರಣೆ ಮುಂದುವರಿಯುತ್ತಾ?

ಖಂಡಿತ. ಸದ್ಯ ಭಯಾನಕ ರೌಡಿಗಳು ಯಾರೂ ಇಲ್ಲ. ಕೆಲವರು ಸಣ್ಣಪುಟ್ಟ ರೌಡಿಗಳಿದ್ದಾರೆ. ಬದಲಾವಣೆಯಾಗಲು ಅವರಿಗೆ ಅವಕಾಶ ಕೊಡುತ್ತೇನೆ. ಆಕಸ್ಮಾತ್ ಬಾಲ ಬಿಚ್ಚಿದರೆ, ಹೇಗೆ ಕತ್ತರಿಸಬೇಕು ಎಂಬುದೂ ನನಗೆ ಗೊತ್ತಿದೆ. ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದಾಗ ರೌಡಿಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿದ್ದೆ. ಅಂಥ ಪ್ರಯತ್ನ ಇನ್ನು ಮುಂದೆ ನಿರಂತರವಾಗಲಿದೆ.