ಬೆಂಗಳೂರಿನಲ್ಲಿ ನೆಟ್‌ಆ್ಯಪ್‌ ದತ್ತಾಂಶ ಕೇಂದ್ರ ಉದ್ಘಾಟನೆ

0
20

ಸಾಫ್ಟ್‌ವೇರ್‌ ಕಂಪನಿ ನೆಟ್‌ಆ್ಯಪ್‌, ಬೆಂಗಳೂರಿನಲ್ಲಿ ದತ್ತಾಂಶ ಕೇಂದ್ರ (ಡಿವಿಇಸಿ) ಆರಂಭಿಸಿದೆ.

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ ನೆಟ್‌ಆ್ಯಪ್‌, ಬೆಂಗಳೂರಿನಲ್ಲಿ ದತ್ತಾಂಶ ಕೇಂದ್ರ (ಡಿವಿಇಸಿ) ಆರಂಭಿಸಿದೆ.

‘ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಇರುವ ಗ್ರಾಹಕರು ಮತ್ತು ಪಾಲುದಾರರಿಗೆ ಕ್ಲೌಡ್‌ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ನೆಟ್‌ಆ್ಯಪ್‌ ಇಂಡಿಯಾದ ಅಧ್ಯಕ್ಷ ಅನಿಲ್‌ ವೆಲ್ಲೂರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಟ್‌ಫೀಲ್ಡ್‌ನ ಹೂಡಿ ರಸ್ತೆಯ ಬಳಿ ಇರುವ ನೆಟ್‌ಆ್ಯಪ್‌ ಗ್ಲೋಬಲ್‌ ಸೆಂಟರ್ ಆಫ್ ಎಕ್ಸಲೆನ್ಸ್‌ ಕ್ಯಾಂಪಸ್‌ನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಕ್ಯಾಲಿಫೋರ್ನಿಯಾ, ಉತ್ತರ ಕರೋಲಿನಾ ಮತ್ತು  ಆ್ಯಮ್‌ಸ್ಟರ್‌ಡ್ಯಾಂನಲ್ಲಿ ‘ಡಿವಿಇಸಿ’ ಹೊಂದಿದ್ದು ಬೆಂಗಳೂರಿನಲ್ಲಿ ಸ್ಥಾಪಿಸಿರುವುದೂ ಸೇರಿದಂತೆ ಒಟ್ಟು ನಾಲ್ಕು ಕೇಂದ್ರಗಳನ್ನು ಹೊಂದಿದಂತಾಗಿದೆ.

‘ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ–ವಹಿವಾಟಿನ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಲು ಈ ಕೇಂದ್ರ ನೆರವಾಗಲಿದೆ’ ಎಂದು ವೆಲ್ಲೂರಿ ಅಭಿಪ್ರಾಯಪಟ್ಟರು.

‘ತಂತ್ರ‌ಜ್ಞಾನ ಸಂಸ್ಥೆಗಳು ತಮ್ಮ ವಹಿವಾಟಿನ ಪ್ರಗತಿಗೆ ಡಿಜಿಟಲ್ ರೂಪಾಂತರಕ್ಕೆ ತೆರೆದುಕೊಳ್ಳುವ ಅಗತ್ಯ ಇದೆ. ಸಂಸ್ಥೆಯನ್ನು ಮುನ್ನಡೆಸುವವರು ದತ್ತಾಂಶದ ಬಗ್ಗೆ ದೂರದೃಷ್ಟಿ ಹೊಂದಿರಬೇಕು.

‘ಆಗ ಮಾತ್ರ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಂಡು ಹೊಸ ಗ್ರಾಹಕರನ್ನು ತಲುಪಲು ಸಾಧ್ಯ’ ವೆಲ್ಲೂರಿ ಅಭಿಪ್ರಾಯಪಟ್ಟರು.

‘ಭಾರತದ ಗ್ರಾಹಕರು ಫ್ಲ್ಯಾಷ್‌ ಸ್ಟೋರೇಜ್‌ ಮತ್ತು ಹೈಬ್ರಿಡ್‌ ಕ್ಲೌಡ್‌ನಂತಹ ಹೊಸ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ನೆಟ್‌ ಆ್ಯಪ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ದೀಪಕ್‌ ವಿಶ್ವೇಶ್ವರಯ್ಯ ಹೇಳಿದರು.