ಬೆಂಗಳೂರಿಗೆ “ಅಂತರ ವಿಶ್ವ ವಿದ್ಯಾಲಯ ಕೇಂದ್ರ(ಐ.ಯು.ಸಿ) “ಮಂಜೂರು : ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೇಳಿಕೆ

0
23

ಯೋಗ ವಿಜ್ಞಾನಗಳ ಅಧ್ಯಯನಕ್ಕಾಗಿ ಬೆಂಗಳೂರಿನಲ್ಲಿ ಅಂತರ ವಿಶ್ವ ವಿದ್ಯಾಲಯ ಕೇಂದ್ರ (ಐಯುಸಿ) ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿ: ಯೋಗ ವಿಜ್ಞಾನಗಳ ಅಧ್ಯಯನಕ್ಕಾಗಿ ಬೆಂಗಳೂರಿನಲ್ಲಿ ಅಂತರ ವಿಶ್ವ ವಿದ್ಯಾಲಯ ಕೇಂದ್ರ (ಐಯುಸಿ) ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ (ಎಸ್‌–ವ್ಯಾಸ) ಈ ಕೇಂದ್ರ ಸ್ಥಾಪನೆಯಾಗಲಿದೆ. ಅಂದಾಜು 100 ಕೋಟಿ ಅನುದಾನದಲ್ಲಿ ಈ ಐಯುಸಿ ಸ್ಥಾಪನೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿದೆ. 

ಯೋಗಕ್ಕೆ ಮಾನ್ಯತೆ ತಂದುಕೊಡುವ ನಿಟ್ಟಿನಲ್ಲಿ ದೇಶದಾದ್ಯಂತ ಹಲವು ಸಂಸ್ಥೆಗಳು ಈ ಕುರಿತ ಕೋರ್ಸ್‌ಗಳನ್ನು ಆರಂಭಿಸಿವೆ. ಈ ನಿಟ್ಟಿನಲ್ಲಿ, ಸಂಶೋಧನೆ ಕೈಗೊಳ್ಳುವುದು ಮತ್ತು ಯೋಗದಿಂದಾಗುವ ಲಾಭಗಳ ಕುರಿತು ಸೂಕ್ತ ದಾಖಲೆಗಳನ್ನು ಒದಗಿಸುವುದು ಐಯುಸಿಯ ಪ್ರಮುಖ ಉದ್ದೇಶವಾಗಲಿದೆ. 

‘ಐಯುಸಿ  ಸ್ಥಾಪನೆ ಕುರಿತು ನೇಮಿಸಲಾಗಿದ್ದ ಸಮಿತಿಯ ಶಿಫಾರಸುಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಒಪ್ಪಿಕೊಂಡಿದೆ. ಬೆಂಗಳೂರಿನಲ್ಲಿ ಐಯುಸಿಯನ್ನು ಮಂಜೂರು ಮಾಡಿದ್ದೇನೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ. 

ಯೋಗಶಿಕ್ಷಣವನ್ನು ಬೋಧಿಸಲು ಸೂಕ್ತವಾದ ಪಠ್ಯಕ್ರಮ ಅಭಿವೃದ್ಧಿ ಪಡಿಸುವುದರ ಜೊತೆಗೆ ಯೋಗ ಶಿಕ್ಷಕರನ್ನು ತಯಾರು ಮಾಡುವ ಕಾರ್ಯವನ್ನು ಕೇಂದ್ರ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರ ಯೋಗ ತರಬೇತುದಾರ ಎಚ್.ಆರ್. ನರೇಂದ್ರ ನೇತೃತ್ವದಲ್ಲಿ ಈ ಕುರಿತು ವರದಿ ನೀಡಲು ಸಮಿತಿಯನ್ನು ರಚಿಸಲಾಗಿತ್ತು.