ಬುಲ್‌ಬುಲ್‌ಗೆ ತತ್ತರಿಸಿದ ಪಶ್ಚಿಮ ಬಂಗಾಳ (ಚಂಡಮಾರುತದಿಂದ ಭಾರಿ ಹಾನಿ l ಇನ್ನಷ್ಟೇ ಸಿಗಬೇಕಿದೆ ನಷ್ಟದ ಅಂದಾಜು)

0
12

ಬುಲ್‌ಬುಲ್‌ ಚಂಡಮಾರುತವು ತಂದೊಡ್ಡಿದ್ದ ಬಾರಿ ಮಳೆ ಮತ್ತು ಗಾಳಿಯು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಮಾಡಿದೆ. ಚಂಡಮಾರುತ ಸಂಬಂಧಿ ಅವಘಡಗಳಲ್ಲಿ 10 ಜನರು ಬಲಿಯಾಗಿದ್ದಾರೆ.

ಕೋಲ್ಕತ್ತ (ಪಿಟಿಐ): ಬುಲ್‌ಬುಲ್‌ ಚಂಡಮಾರುತವು ತಂದೊಡ್ಡಿದ್ದ ಬಾರಿ ಮಳೆ ಮತ್ತು ಗಾಳಿಯು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಮಾಡಿದೆ. ಚಂಡಮಾರುತ ಸಂಬಂಧಿ ಅವಘಡಗಳಲ್ಲಿ 10 ಜನರು ಬಲಿಯಾಗಿದ್ದಾರೆ.

ಪಶ್ಚಿಮ ಬಂಗಾಳವನ್ನು ಹಾದು ಹೋಗಿರುವ ಬುಲ್‌ಬುಲ್‌ ಚಂಡಮಾರುತವು, ಈಗ ಬಾಂಗ್ಲಾದೇಶವನ್ನು ತಲುಪಿದೆ. ಆದರೆ ತೀವ್ರತೆ ಕಡಿಮೆಯಾಗಿದೆ.

ನವೆಂಬರ್ 9 ರ  ಶನಿವಾರ ತಡರಾತ್ರಿ ಪಶ್ಚಿಮ ಬಂಗಾಳವನ್ನು ಬುಲ್‌ಬುಲ್ ಪ್ರವೇಶಿಸಿತ್ತು. ಈ ವೇಳೆ ಗಾಳಿ ವೇಗ ಪ್ರತಿ ಗಂಟೆಗೆ 120 ಕಿ.ಮೀ.ನಷ್ಟಿತ್ತು. ಹೀಗಾಗಿ ಚಂಡಮಾರುತವು ಹಾದುಹೋದ ಪ್ರದೇಶದಲ್ಲಿದ್ದ ಗುಡಿಸಲು, ಮನೆಗಳ ಚಾವಣಿ ಹಾರಿಹೋಗಿವೆ. ನೂರಾರು ಮರಗಳು ಬುಡಮೇಲಾಗಿವೆ. ಬಾಳೆ ಗಿಡಗಳ ಎಲೆಗಳು ಛಿದ್ರವಾಗಿವೆ. ಆದರೆ ಈ ಪ್ರದೇಶಗಳಲ್ಲಿ ಇದ್ದ ಜನರನ್ನು ಮೊದಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದ ಕಾರಣ ಪ್ರಾಣಹಾನಿ ಕಡಿಮೆಯಾಗಿದೆ.

ಬಾಂಗ್ಲಾದಲ್ಲಿ ಹತ್ತು ಸಾವು

ಬುಲ್‌ಬುಲ್‌ ಚಂಡಮಾರುತವು ಭಾರಿ ಮಳೆಯೊಂದಿಗೆ ಬಾಂಗ್ಲಾದೇಶವನ್ನು ಪ್ರವೇಶಿಸಿದೆ. ಮಳೆ ಸಂಬಂಧಿ ಘಟನೆಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಒಳನಾಡು ಪ್ರವೇಶಿಸುತ್ತಿದ್ದಂತೆಯೇ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ.

ಚಂಡಮಾರುತವು ಭಾರಿ ವೇಗದೊಂದಿಗೆ ಬಾಂಗ್ಲಾದೇಶವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರವೇ ಮುನ್ಸೂಚನೆ ನಿಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಂಗ್ಲಾ ಸರ್ಕಾರ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಹೀಗಾಗಿ ಪ್ರಾಣಹಾನಿಯ ಪ್ರಮಾಣ ಕಡಿಮೆ ಇದೆ ಎಂದು ಮೂಲಗಳು ಹೇಳಿವೆ.

ಆದರೆ ಮಳೆ ಸಂಬಂಧಿ ಘಟನೆಗಳಲ್ಲಿ 50ಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಚಂಡಮಾರುತದಿಂದ ಭಾರಿ ಹಾನಿಯಾಗಿದೆ. ಹಾನಿಯನ್ನು ಸರಿಪಡಿಸುವ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕೆ ಕೆಲವು ದಿನಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಲಕ್ಷಾಂತರ ನಿರಾಶ್ರಿತರು ಶಿಬಿರಗಳಲ್ಲೇ ಉಳಿಯಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.