ಬೀದರ್: 307 ಅಪೌಷ್ಟಿಕ ಮಕ್ಕಳ ಸ್ಥಿತಿ ಗಂಭೀರ (ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಪೌಷ್ಟಿಕ ಮಕ್ಕಳ ಸಂಖ್ಯೆ)

0
271

ಮಕ್ಕಳ ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದರೂ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ.ಬೀದರ್‌ ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯದ ವರೆಗೆ ತಪಾಸಣೆ ನಡೆಸಿದ 1,36,192 ಮಕ್ಕಳಲ್ಲಿ 42,750 ಮಕ್ಕಳ ತೂಕ ಕಡಿಮೆ ಇರುವುದು ಕಂಡು ಬಂದಿದೆ. ಇದರಲ್ಲಿ 508 ಮಕ್ಕಳ ಆರೋಗ್ಯ ಕ್ಷೀಣಿಸಿದ್ದು, 307 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಮಾಹಿತಿ ಒದಗಿಸಿದೆ.

ಬೀದರ್‌: ಮಕ್ಕಳ ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದರೂ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಅಪೌಷ್ಟಿಕ ಮಕ್ಕಳ ಅನುಪಾತದಲ್ಲಿ ಕೊಪ್ಪಳ ಮೊದಲು ಸ್ಥಾನ, ಬೀದರ್‌ ಎರಡನೇ ಸ್ಥಾನ, ರಾಯಚೂರು ಜಿಲ್ಲೆ ಮೂರನೇ ಸ್ಥಾನದಲ್ಲಿವೆ. ಈ ಮಕ್ಕಳ ಆರೋಗ್ಯ ಚೇತರಿಸಿಕೊಳ್ಳದೆ ಇರುವುದು ಪಾಲಕರಲ್ಲಿ ಆತಂಕ ಸೃಷ್ಟಿಸಿದೆ.

ಬೀದರ್‌ ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯದ ವರೆಗೆ ತಪಾಸಣೆ ನಡೆಸಿದ 1,36,192 ಮಕ್ಕಳಲ್ಲಿ 42,750 ಮಕ್ಕಳ ತೂಕ ಕಡಿಮೆ ಇರುವುದು ಕಂಡು ಬಂದಿದೆ. ಇದರಲ್ಲಿ 508 ಮಕ್ಕಳ ಆರೋಗ್ಯ ಕ್ಷೀಣಿಸಿದ್ದು, 307 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಮಾಹಿತಿ ಒದಗಿಸಿದೆ.

2017ರ ಸೆಪ್ಟೆಂಬರ್‌ನಲ್ಲಿ 1,43,924 ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಾಗ 40,942 ಮಕ್ಕಳ ತೂಕ ಕಡಿಮೆ ಇರುವುದು ಕಂಡು ಬಂದಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ 1,36,041 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ ನಂತರ 42,459 ಮಕ್ಕಳ ತೂಕ ಕಡಿಮೆ ಇರುವುದು ದಾಖಲಾಗಿದೆ. ಅಪೌಷ್ಟಿಕ ಮಕ್ಕಳ ಅನುಪಾತ ಕಳೆದ ವರ್ಷ ಶೇಕಡ 28.45ರಷ್ಟು ಇದ್ದರೆ, ಈ ವರ್ಷ ಶೇಕಡ 30.99ಕ್ಕೆ ಹೆಚ್ಚಿದೆ.

ಮಾತೃಪೂರ್ಣ ಯೋಜನೆ ತೆವಳುತ್ತ ಸಾಗಿದೆ. ಟಿ.ಎಂ. ವಿಜಯಭಾಸ್ಕರ್‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾಗ ಬೀದರ್‌ಗೆ ಭೇಟಿ ನೀಡಿದ್ದರು. ಆಗ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ
ದ್ದರು. 11 ತಿಂಗಳಲ್ಲಿ ಸ್ವಲ್ಪವೂ ಬದಲಾವಣೆ ಕಾಣದ ಕಾರಣ ಮೂರು ದಿನಗಳ ಹಿಂದೆ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಅಪೌಷ್ಟಿಕ ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

‘ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರ (ಎನ್‌ಆರ್‌ಸಿ) ಇದೆ. ಇದೀಗ ಪ್ರತಿ ತಾಲ್ಲೂಕಿನಲ್ಲೂ ಎನ್‌ಆರ್‌ಸಿ ಆರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲೆಯಲ್ಲಿ 60 ಹೆಣ್ಣುಮಕ್ಕಳು ಸೇರಿ ಒಟ್ಟು 108 ಮಕ್ಕಳ ಸ್ಥಿತಿ ಗಂಭೀರವಾಗಿದೆ. ಪಾಲಕರ ಮನವೊಲಿಸಿ ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಅಗತ್ಯವಿದೆ’ ಎಂದು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ ಹೇಳುತ್ತಾರೆ.

‘ಜಿಲ್ಲೆಯ 1,893 ಅಂಗನವಾಡಿ ಕೇಂದ್ರಗಳಲ್ಲಿ 1,43,924 ಮಕ್ಕಳು ಇದ್ದಾರೆ. ಹತ್ತು ತಿಂಗಳಿಂದ ಕಡಿಮೆ ತೂಕದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿರುವ ಪೌಷ್ಟಿಕ ಆಹಾರ ಮಕ್ಕಳಿಗೆ ಸರಿಯಾಗಿ ತಲುಪದಿರುವ ದೂರುಗಳು ಬರುತ್ತಿರುವ ಕಾರಣ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ನಿರ್ಧರಿಸಲಾಗಿದೆ.

ಪ್ರತಿ ತಿಂಗಳು ಅಧಿಕಾರಿಗಳ ಸಭೆ ನಡೆಸಿ ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು ’  ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ.

‘ಎನ್‌ಆರ್‌ಸಿ ಕೇಂದ್ರದಲ್ಲಿ ಮಗು ದಾಖಲಾದ ತಕ್ಷಣ ಹಾಗೂ ಬಿಡುಗಡೆ ಸಮಯದಲ್ಲಿ ತಲಾ 1 ಸಾವಿರ ಕೊಡಲಾಗುತ್ತದೆ.
ಒಂದು ವೇಳೆ ಮಗುವಿನ ತಾಯಿ ಕೂಲಿ ಮಾಡುತ್ತಿದ್ದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಗು ಆಸ್ಪತ್ರೆಯಲ್ಲಿ ದಾಖಲಾಗಿರುವಷ್ಟು ದಿನ, ಒಂದು ದಿನಕ್ಕೆ 249ರಂತೆ  ಪಾವತಿಸಲಾಗುತ್ತಿದೆ’ ಎಂದು ಹೇಳುತ್ತಾರೆ.

‘ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸಿದಲ್ಲಿ ಶಿಶುವಿನ ಬೆಳವಣಿಗೆ ಹಂತದಲ್ಲೇ ಅಪೌಷ್ಟಿಕತೆ ನಿವಾರಿಸಬಹುದು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳು ಸಹ ಜಾಗೃತಿ ಮೂಡಿಸಲು ವಿಫಲರಾಗಿದ್ದಾರೆ’ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ದೂರುತ್ತಾರೆ.