ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂ ಒಪ್ಪಿಗೆ: ಒಂದು ರಾಜ್ಯ ಒಂದು ಮತ ನೀತಿ ಕೈಬಿಟ್ಟ ಸುಪ್ರೀಂ ಕೋರ್ಟ್

0
16

ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ. ಅಲ್ಲದೆ, ಮಹಾರಾಷ್ಟ್ರ, ಗುಜರಾತ್‌ನ ಎಲ್ಲ ಮೂರು ಕ್ರಿಕೆಟ್‌ ಸಮಿತಿಗಳಿಗೆ ಪೂರ್ಣ ಸದಸ್ಯತ್ವವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದ್ದು, ಒಂದು ರಾಜ್ಯ ಒಂದು ಮತ ಎಂಬ ಮಾನದಂಡವನ್ನು ಕೈಬಿಟ್ಟಿದೆ.

ಹೊಸದಿಲ್ಲಿ: ಬಿಸಿಸಿಐ  ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ. ಅಲ್ಲದೆ, ಮಹಾರಾಷ್ಟ್ರ, ಗುಜರಾತ್‌ನ ಎಲ್ಲ ಮೂರು ಕ್ರಿಕೆಟ್‌ ಸಮಿತಿಗಳಿಗೆ ಪೂರ್ಣ ಸದಸ್ಯತ್ವವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದ್ದು, ಒಂದು ರಾಜ್ಯ ಒಂದು ಮತ ಎಂಬ ಮಾನದಂಡವನ್ನು ಕೈಬಿಟ್ಟಿದೆ. 

ಅಲ್ಲದೆ, ರೈಲ್ವೇಸ್, ಸರ್ವೀಸ್ ಹಾಗೂ ವಿಶ್ವವಿದ್ಯಾನಿಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐನಲ್ಲಿ ಸುಪ್ರೀಂಕೋರ್ಟ್ ಪೂರ್ಣ ಸದಸ್ಯತ್ವ ನೀಡಿದೆ. ಈ ಹಿಂದೆ ಲೋಧಾ ಸಮಿತಿಯ ಶಿಫಾರಸಿನಂತೆ ಅವರೆಲ್ಲರ ಸದಸ್ಯತ್ವವನ್ನು ಕೋರ್ಟ್ ರದ್ದುಗೊಳಿಸಿತ್ತು. ಇನ್ನು, ಈ ನೂತನ ಸಂವಿಧಾನವನ್ನು ನಾಲ್ಕು ವಾರಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಬಿಸಿಸಿಐಗೆ ತಿಳಿಸಿದೆ. ಜತೆಗೆ, ರಾಜ್ಯಗಳ ಹಾಗೂ ಇತರೆ ಸದಸ್ಯತ್ವ ಸಂಸ್ಥೆಗಳು ಬದಲಾದ ಸಂವಿಧಾನವನ್ನು 30 ದಿನಗಳಲ್ಲಿ ದಾಖಲಿಸಿಕೊಳ್ಳಿ ಎಂದೂ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ. ಇದರಿಂದಾಗಿ ಲೋಧಾ ಸಮಿತಿಯ ಕೆಲ ಶಿಫಾರಸುಗಳಿಗೆ ಕೈ ಬಿಟ್ಟಂತಾಗಿದೆ. 

ಇನ್ನು, ಬಿಸಿಸಿಐನಲ್ಲಿ ಒಂದೇ ಹುದ್ದೆಯನ್ನು ಸತತ ಎರಡು ಬಾರಿ ಹೊಂದಿದ ಬಳಿಕ ಆ ಸದಸ್ಯನನ್ನು ಉಚ್ಛಾಟಿಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ, ಈ ಸಂವಿಧಾನವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕ್ರಿಕೆಟ್ ಸಂಘಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಹಾಗೆ, ಬಿಸಿಸಿಐ ಸಂವಿಧಾನವನ್ನು 30 ದಿನಗಳೊಳಗೆ ಅಳವಡಿಸಿಕೊಳ್ಳಿ ಎಂದು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.