ಬಿಸಿಸಿಐನಿಂದ ಕ್ರಿಕೆಟಿಗರಾದ ಪಾಂಡ್ಯ, ರಾಹುಲ್‌ಗೆ ₹ 20 ಲಕ್ಷ ದಂಡ

0
235

ಟಿವಿಯ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌.ರಾಹುಲ್‌ ಅವರಿಗೆ ಬಿಸಿಸಿಐ ತಲಾ ₹ 20 ಲಕ್ಷ ದಂಡ ವಿಧಿಸಿದೆ.

ನವದೆಹಲಿ(ಪಿಟಿಐ): ಟಿವಿಯ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌.ರಾಹುಲ್‌ ಅವರಿಗೆ ಬಿಸಿಸಿಐ ತಲಾ  20 ಲಕ್ಷ ದಂಡ ವಿಧಿಸಿದೆ. 

ದಂಡದ ಹಣವನ್ನು ಎಲ್ಲಿ ಪಾವತಿಸಬೇಕು :  ಒಂಬುಡ್ಸ್‌ಮನ್ ಡಿ.ಕೆ.ಜೈನ್‌ ಅವರು ಈ ಆದೇಶ ಹೊರಡಿಸಿದ್ದು, 10 ಲಕ್ಷವನ್ನು ಅರೆ ಸೇನಾಪಡೆಯ ಹುತಾತ್ಮ ಯೋಧರ ಪತ್ನಿಯರ ಕಲ್ಯಾಣಕ್ಕಾಗಿ ನೀಡಬೇಕು. ಉಳಿದ  10 ಲಕ್ಷವನ್ನು ಅಂಧರ ಕ್ರಿಕೆಟ್‌ ಸಂಸ್ಥೆಯ ನಿಧಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.  

ಎಷ್ಟು ದಿನದೊಳಗೆ ದಂಡ ಪಾವತಿಸಬೇಕು :  ನಾಲ್ಕು ವಾರದೊಳಗಾಗಿ  ದಂಡ ಪಾವತಿಸಬೇಕು. ಇಲ್ಲವಾದರೆ ಬಿಸಿಸಿಐ ಮುಂದಿನ ಪಂದ್ಯಗಳ ಸಂಭಾವನೆಯಲ್ಲಿ ಭರಿಸಿಕೊಳ್ಳಲಿದೆ ಎಂದು ಜಾಲತಾಣದಲ್ಲಿ ಎಚ್ಚರಿಸಿದ್ದಾರೆ. 

‘ಆಟಗಾರರು ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗಳು ಸೂಕ್ಷ್ಮವಾಗಿದ್ದು, ಸಭ್ಯತೆಯ ಮಟ್ಟ ಮೀರಿವೆ. ಆದ್ದರಿಂದ ಇಡೀ ಘಟನೆ ಕ್ಷಮಾರ್ಹವಲ್ಲ. ಶಿಕ್ಷೆ ವಿಧಿಸಲು ನನಗೆ ಯಾವ ಹಿಂಜರಿಕೆಯೂ ಇಲ್ಲ’ ಎಂದು ಜೈನ್‌ ತಿಳಿಸಿದ್ದಾರೆ.

‘ಕ್ರಿಕೆಟಿಗರು ವಿಶೇಷವಾಗಿ ಯುವಜನತೆಯ ಮೇಲೆ ಅಗಾಧ ಪ್ರಭಾವ ಬೀರುತ್ತಾರೆ. ಅಭಿಮಾನಿಗಳು ಕೇವಲ ಅವರ ಆಟವನ್ನು ಮಾತ್ರ ನೋಡುವುದಿಲ್ಲ. ನಡವಳಿಕೆಯನ್ನು ಅನುಕರಿಸುತ್ತಾರೆ. ಎಚ್ಚರಿಕೆಯಿಂದ ನಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ. 

ಯಾವ ಕಾರ್ಯಕ್ರಮ :  ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಆಟಗಾರರು ಲೈಂಗಿಕತೆ ಕುರಿತು ಮಾತನಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ ಆಗುತ್ತಿದ್ದಂತೆಯೇ ಇಬ್ಬರೂ ಆಟಗಾರರು ಬೇಷರತ್‌ ಕ್ಷಮೆಯಾಚಿಸಿದ್ದರು.  ಆದ್ದರಿಂದ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ಸರಣಿಯ ಪಂದ್ಯಗಳಿಂದ ಅವರನ್ನು ಅಮಾನತು ಮಾಡಲಾಗಿತ್ತು.

ಘಟನೆ ನಡೆದಾಗ  ಬಿಸಿಸಿಐಗೆ ಒಂಬಡ್ಸ್‌ಮನ್‌ ನೇಮಕ ಆಗಿರಲಿಲ್ಲ. ಈ ತಿಂಗಳ ಆರಂಭದಲ್ಲಿ ಜೈನ್‌ ಅವರು ಒಂಬುಡ್ಸ್‌ಮನ್ ಆಗಿ ನೇಮಕಗೊಂಡಿದ್ದರು. ಇದೀಗ ಘಟನೆಯನ್ನು ಪರಾಮರ್ಶಿಸಿ ದಂಡ ವಿಧಿಸಲಾಗಿದೆ. 

ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಇಬ್ಬರೂ ಆಟಗಾರರು ಸ್ಥಾನ ಪಡೆದಿದ್ದಾರೆ.