ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿಯವರಿಗೂ ಅವಕಾಶ: 5 ಪಿಎಸ್​ಎಲ್​ವಿ ಉಡಾಹಕ ನಿರ್ಮಾಣಕ್ಕೆ ಅರ್ಜಿ

0
13

: ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗಿಯಾಗಲು ಖಾಸಗಿ ವಲಯದವರಿಗೂ ಅವಕಾಶ ಮಾಡಿಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಧರಿಸಿದೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗಿಯಾಗಲು ಖಾಸಗಿ ವಲಯದವರಿಗೂ ಅವಕಾಶ ಮಾಡಿಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್​ ಇನ್​ ಇಂಡಿಯಾ ಯೋಜನೆಯಡಿ 5 ಪಿಎಸ್​ಎಲ್​ವಿ ಉಡಾಹಕಗಳ ನಿರ್ಮಾಣದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವ ಖಾಸಗಿಯವರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಆಹ್ವಾನ ಕೇವಲ ಭಾರತೀಯ ಕಂಪನಿಗಳಿಗೆ ಸೀಮಿತವಾಗುತ್ತದೆ. ವಿದೇಶಿ ಸಂಸ್ಥೆಗಳಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ. ಈ ಕುರಿತು ಇಸ್ರೋ ಸಾಕಷ್ಟು ಸಮಯದಿಂದ ಚಿಂತನೆ ನಡೆಸಿತ್ತು. ಇದೀಗ ಅದನ್ನು ಅಧಿಕೃತವಾಗಿ ಜಾರಿಗೊಳಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ಹೇಳಿದ್ದಾರೆ.

ಸುವರ್ಣ ವರ್ಷಾಚರಣೆ ಸಂದರ್ಭದಲ್ಲಿ ಮಹತ್ವದ ನಿರ್ಧಾರ

ಇಸ್ರೋ 50ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾಗಿಯಾಗಲು ಖಾಸಗಿಯವರಿಗೂ ಅವಕಾಶ ಮಾಡಿಕೊಟ್ಟಿದೆ. ವಿಕ್ರಮ್​ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (ವಿಎಸ್​ಎಸ್​ಸಿ) ಹಿರಿಯ ಅಧಿಕಾರಿ ಪ್ರಕಾರ ಒಂದು ಪಿಎಸ್​ಎಲ್​ವಿ ಉಡಾಹಕ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಈಗ 5 ಉಡಾಹಕಗಳ ನಿರ್ಮಾಣ ಕಾರ್ಯದಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಯೋಜನಾ ಮೊತ್ತ 1 ಸಾವಿರ ಕೋಟಿ ರೂ. ಆಗಿದೆ. 

ಖಾಸಗಿ ಸಹಭಾಗಿತ್ವದ ವಿಷಯದ ನಿರ್ವಹಣೆ ಜವಾಬ್ದಾರಿಯನ್ನು 2019ರ ಮಾರ್ಚ್​ 6ರಂದು ಹೊಸದಾಗಿ ಸ್ಥಾಪಿಸಿರುವ ನ್ಯೂ ಸ್ಪೇಸ್​ ಇಂಡಿಯಾ ಲಿಮಿಟೆಡ್​ (ಎನ್​ಎಸ್​ಎಲ್​ಐ) ಸಂಸ್ಥೆಗೆ ನೀಡಲಾಗಿದೆ ಎಂದು ಕೆ. ಶಿವನ್​ ತಿಳಿಸಿದ್ದಾರೆ.