‘ಬಾಹ್ಯಾಕಾಶ ಕಮಾಂಡ್‌’ಗೆ ಚಾಲನೆ (ಅಮೆರಿಕದ ಉಪಗ್ರಹಗಳಿಗೆ ಶತ್ರು ರಾಷ್ಟ್ರಗಳಿಂದ ಹಾನಿಯಾಗದಂತೆ ಕಾವಲು ವ್ಯವಸ್ಥೆ)

0
13

ಅಮೆರಿಕ ಬಾಹ್ಯಾಕಾಶ ಕಮಾಂಡ್‌ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಸ್ಟ್ 30 ರ ಶುಕ್ರವಾರ ಅಧಿಕೃತ ಚಾಲನೆ ನೀಡಿದರು.

ವಾಷಿಂಗ್ಟನ್‌ (ಪಿಟಿಐ): ಅಮೆರಿಕ ಬಾಹ್ಯಾಕಾಶ ಕಮಾಂಡ್‌ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಆಗಸ್ಟ್ 30 ರ ಶುಕ್ರವಾರ ಅಧಿಕೃತ ಚಾಲನೆ ನೀಡಿದರು.

‘ರಷ್ಯಾ, ಚೀನಾ ದೇಶಗಳ ಸಾಧನೆ ನಂತರವೂ ಅಮೆರಿಕದ ಪಾರುಪತ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಭವಿಷ್ಯದಲ್ಲೂ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಈ ಕ್ರಮಕೈಗೊಳ್ಳಲಾಗಿದೆ’ ಎಂದು ಪ್ರತಿಪಾದಿಸಿದರು.

ರಷ್ಯಾ ಮತ್ತು ಚೀನಾ ಸೇರಿದಂತೆ ಇತರ ದೇಶಗಳಿಂದ ತನ್ನ ಉಪಗ್ರಹಗಳಿಗೆ ಧಕ್ಕೆಯಾಗುವ ಆತಂಕದ ಪರಿಸ್ಥಿತಿ ಹೆಚ್ಚಿದ್ದರಿಂದ ಬಾಹ್ಯಾಕಾಶ ಕಮಾಂಡ್‌ ಸ್ಥಾಪನೆಗೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

‘ಅಮೆರಿಕದ ಅಸ್ತಿತ್ವಕ್ಕೆ ಧಕ್ಕೆ ಮಾಡಲು ಬಯಸುವವರು ಅಂತರಿಕ್ಷ ಕ್ಷೇತ್ರದಲ್ಲೂ ನಮಗೆ ಸವಾಲು ಒಡ್ಡಬೇಕು. ಇದು, ಸಂಪೂರ್ಣವಾಗಿ ಹೊಸ ರೀತಿಯ ಸ್ಪರ್ಧೆ’ ಎಂದು ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೊನಾಲ್ಡ್‌ ಟ್ರಂಪ್‌ ಹೇಳಿದರು.

11ನೇ ಕಾರ್ಯಾಚರಣೆ ಕಮಾಂಡ್‌ನ ಸ್ಥಾಪನೆಯನ್ನು ಮೈಲಿಗಲ್ಲು ಎಂದು ಬಣ್ಣಿಸಿದ ಟ್ರಂಪ್‌, ಇದು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಕುರಿತು ಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.

ಜನರಲ್‌ ಜಾನ್‌ ಡಬ್ಲ್ಯೂ ರೇಮಂಡ್‌ ಅವರು ಅಮೆರಿಕ ಬಾಹ್ಯಾಕಾಶ ಕಮಾಂಡ್‌ನ ಕಮಾಂಡರ್‌ ಆಗಿರುತ್ತಾರೆ. ಇದು, ಅಮೆರಿಕದ ಸೇನಾ ಪಡೆಯ 11ನೇ ಕಮಾಂಡ್‌ ಆಗಿದೆ. ಇದು, ಒಟ್ಟು 287 ಯೋಧರನ್ನು ಒಳಗೊಂಡಿದ್ದು, ಇದರ ಕಾರ್ಯಸ್ಥಾನ ಕುರಿತು ಅಂತಿಮ ತೀರ್ಮಾನ ಆಗಿಲ್ಲ ಎಂದು ಸಿಎನ್‌ಎನ್‌ ವರದಿ ಮಾಡಿದೆ.
 
‘ಇದು, ಮಹತ್ವದ ಹೆಜ್ಜೆ. ನೂತನ ಕಮಾಂಡ್‌ ‘ಸ್ಪೇಸ್‌ಕಾಂ’ ಭವಿಷ್ಯದ ಯುದ್ಧಭೂಮಿಯಾದ ಅಂತರಿಕ್ಷದಲ್ಲಿ ಅಮೆರಿಕದ ಹಿತಾಸಕ್ತಿಯನ್ನು ರಕ್ಷಿಸಲಿದೆ’ ಎಂದು ಅಮೆರಿಕ ಸೇನೆಯ ಪ್ರಧಾನ ಕಮಾಂಡರ್‌ ಕೂಡಾ ಆಗಿರುವ ಟ್ರಂಪ್‌ ಹೇಳಿದರು.
 
‘ಅಂತರಿಕ್ಷದಲ್ಲಿ ಅಮೆರಿಕದ ಪಾರುಪತ್ಯಕ್ಕೆ ಎಂದಿಗೂ ಧಕ್ಕೆಯಾಗದಂತೆ ಸ್ಪೇಸ್‌ಕಾಂ ಕಟ್ಟೆಚ್ಚರ ವಹಿಸಲಿದೆ. ಇದೊಂದು ಐತಿಹಾಸಿಕ ದಿನ. ಅಂತರಿಕ್ಷದಲ್ಲಿ ಅಮೆರಿಕದ ಭದ್ರತೆ ಮತ್ತು ರಕ್ಷಣೆಯಲ್ಲಿ ಆದ್ಯತೆಯನ್ನು ಗುರುತಿಸುವ ದಿನ’ ಎಂದರು.
 
1985 ರಿಂದ 2002ರ ಅವಧಿಯಲ್ಲಿದ್ದ ಅಂತರಿಕ್ಷ ಕಮಾಂಡ್‌ಗೆ ಈಗ ಮತ್ತೆ ಚಾಲನೆ ದೊರೆತಂತಾಗಿದೆ.
 
ಬಾಹ್ಯಾಕಾಶದಲ್ಲಿನ ಅಮೆರಿಕ ಹಿತಾಸಕ್ತಿ ಕಾಪಾಡಲು ಸಂಪನ್ಮೂಲಗಳು ಅಗತ್ಯ. ಸ್ವತಂತ್ರ ಬಾಹ್ಯಾಕಾಶ ಪಡೆ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ.

  – ಮಾರ್ಕ್‌ ಎಸ್ಪೆರ್‌ ರಕ್ಷಣಾ ಕಾರ್ಯದರ್ಶಿ