ಬಾಲಾಕೋಟ್​ ಮೇಲೆ ಬಾಂಬ್​ ದಾಳಿ ಮಾಡಿದ್ದ ಐವರು ಐಎಎಫ್​ ಪೈಲಟ್​ಗಳಿಗೆ ವಾಯುಸೇನಾ ಪದಕ (ಶೌರ್ಯ) ಪುರಸ್ಕಾರ

0
37

ಫೆಬ್ರವರಿ 26ರಂದು ಪಾಕಿಸ್ತಾನದ ಗಡಿ ದಾಟಿ ಹೋಗಿ ಬಾಲಾಕೋಟ್​ನಲ್ಲಿದ್ದ ಜೈಷ್​​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ನೆಲೆಗಳ ಮೇಲೆ ಬಾಂಬ್​ ದಾಳಿ ಮಾಡಿದ್ದ ಭಾರತೀಯ ವಾಯುಪಡೆಯ ಐವರು ಪೈಲಟ್​ಗಳಿಗೆ ವಾಯುಸೇನಾ (ಶೌರ್ಯ) ಪದಕ ನೀಡಲು ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಫೆಬ್ರವರಿ 26ರಂದು ಪಾಕಿಸ್ತಾನದ ಗಡಿ ದಾಟಿ ಹೋಗಿ ಬಾಲಾಕೋಟ್​ನಲ್ಲಿದ್ದ ಜೈಷ್​​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ನೆಲೆಗಳ ಮೇಲೆ ಬಾಂಬ್​ ದಾಳಿ ಮಾಡಿದ್ದ ಭಾರತೀಯ ವಾಯುಪಡೆಯ ಐವರು ಪೈಲಟ್​ಗಳಿಗೆ ವಾಯುಸೇನಾ(ಶೌರ್ಯ)  ಪದಕ ನೀಡಲು ಸರ್ಕಾರ ನಿರ್ಧರಿಸಿದೆ.

ಫೆ.14ರಂದು ಪುಲ್ವಾಮಾದಲ್ಲಿ ಜೈಷ್​ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಗೆ 40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ ಫೆ.26ರಂದು ವಾಯುಸೇನೆ ಪಾಕ್​ನ ಉಗ್ರ ನೆಲೆಯ ಮೇಲೆ ಬಾಂಬ್​ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಲ್ಗೊಂಡಿದ್ದ ವಿಂಗ್​ ಕಮಾಂಡರ್​ ಅಮಿತ್​ ರಂಜನ್, ಸ್ಕ್ವಾಡ್ರನ್‌ ಲೀಡರ್‌ಗಳಾದ ರಾಹುಲ್​ ಬಾಸೋಯ, ಪಂಕಜ್ ಭುಜಾಡೆ, ಬಿಕೆನ್​ ರೆಡ್ಡಿ ಮತ್ತು ಶಶಾಂಕ್​ ಸಿಂಗ್​ ಅವರಿಗೆ ವಾಯುಸೇನಾ ಪದಕ (ಶೌರ್ಯ) ನೀಡಲಾಗುತ್ತಿದೆ ಎಂದು ಎಎನ್​ಐ ವರದಿ ಮಾಡಿದೆ.

ಈ ಐವರೂ ಮಿರಾಜ್​ 2000 ಯುದ್ಧ ವಿಮಾನದ ಪೈಲಟ್​ಗಳಾಗಿದ್ದಾರೆ. ಹಾಗೇ ಈ ದಾಳಿ ವೇಳೆ ಯುದ್ಧ ವಿಮಾನ ಪತನಗೊಂಡು ಪಾಕ್​ ನೆಲದಲ್ಲಿ ಸೆರೆಸಿಕ್ಕಿದ್ದು, ತೀವ್ರವಾಗಿ ಗಾಯಗೊಂಡಿದ್ದರೂ ನಮ್ಮ ಸೈನ್ಯದ ಯಾವುದೇ ಗುಟ್ಟು ಹೊರಹಾಕದೆ, ದಿಟ್ಟವಾಗಿ ಪರಿಸ್ಥಿತಿ ಎದುರಿಸಿ, ಒಂದೇ ದಿನದಲ್ಲಿ ಸ್ವದೇಶಕ್ಕೆ ಮರಳಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಗೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವೀರ ಚಕ್ರ ಪದಕ ಪ್ರದಾನ ಮಾಡುವುದು ಖಚಿತವಾಗಿದೆ.