ಬಾಬ್ರಿ ಧ್ವಂಸ ವಿಚಾರಣೆಗೆ ಸುಪ್ರೀಂ ಗಡುವು: 9 ತಿಂಗಳಲ್ಲಿ ತೀರ್ಪು ನೀಡಲು ಸೂಚನೆ

0
10

ವಿವಾದಿತ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆಯನ್ನು 9 ತಿಂಗಳೊಳಗೆ ಅಂತ್ಯಗೊಳಿಸಿ ತೀರ್ಪು ನೀಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನವದೆಹಲಿ: ವಿವಾದಿತ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆಯನ್ನು 9 ತಿಂಗಳೊಳಗೆ ಅಂತ್ಯಗೊಳಿಸಿ ತೀರ್ಪು ನೀಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿ ಇತರರ ವಿರುದ್ಧದ ವಿಚಾರಣೆಗೆ ಹೆಚ್ಚುವರಿ 2 ವರ್ಷ ಕಾಲಾವಕಾಶ ಕೋರಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಆದರೆ ಉತ್ತರಪ್ರದೇಶ ಸರ್ಕಾರ, ಸಿಬಿಐ ಹಾಗೂ ವಿಶೇಷ ನ್ಯಾಯಾಲಯದ ಮನವಿ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಮುಂದಿನ 9 ತಿಂಗಳೊಳಗೆ ಎಲ್ಲ ವಿಚಾರಣೆ ಮುಗಿಸಿ ಅಂತಿಮ ತೀರ್ಪು ನೀಡಬೇಕು. 6 ತಿಂಗಳೊಳಗೆ ಎಲ್ಲ ಸಾಕ್ಷಿಗಳ ಹೇಳಿಕೆ ಪಡೆಯಬೇಕು ಹಾಗೂ ದಾಖಲೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.

2017ರ ಆದೇಶವೇನಾಗಿತ್ತು?: ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಪ್ರಮುಖ ರಾಜಕೀಯ ನಾಯಕರ ಮೇಲಿನ ಆರೋಪ ಕೈಬಿಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, 2 ವರ್ಷಗಳೊಳಗೆ ವಿಚಾರಣೆ ಅಂತ್ಯಗೊಳಿಸುವಂತೆ ಸಿಬಿಐ ವಿಶೇಷ ಕೋರ್ಟ್​ಗೆ ಕಾಲಮಿತಿ ನಿಗದಿಗೊಳಿಸಿತ್ತು. ಸುಪ್ರೀಂ ಕೋರ್ಟ್ ಕಾಲಮಿತಿ ಮುಗಿದ ಹಿನ್ನೆಲೆಯಲ್ಲಿ ಹೆಚ್ಚುವರಿ 2 ವರ್ಷ ಅವಧಿಯನ್ನು ಮತ್ತೆ ಕೋರಲಾಗಿತ್ತು.

ಪ್ರಕರಣವೇನು?: 1992ರ ಡಿ.6ರಂದು ಉತ್ತರ ಪ್ರದೇಶದ ಅಯೋಧ್ಯೆ ಬಳಿ ಇರುವ ಬಾಬ್ರಿ ಕಟ್ಟಡವನ್ನು ಕರಸೇವಕರು ಧ್ವಂಸಗೊಳಿಸಿದ್ದರು. ರಾಮ ಜನ್ಮಭೂಮಿ ಯಲ್ಲಿ ಈ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದು ಕರಸೇವಕರ ಆರೋಪವಾಗಿತ್ತು. ಮಸೀದಿ ಧ್ವಂಸಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಪ್ರಚೋದನೆ ನೀಡಿದ್ದರು ಎನ್ನುವ ಆರೋಪವಿದೆ. ಈ ಹಿರಿಯ ನಾಯಕರು ಈಗಾಗಲೇ ವಿಶೇಷ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದು, ಹೇಳಿಕೆಯನ್ನೂ ದಾಖಲಿಸಿದ್ದಾರೆ.

ನ್ಯಾಯಾಧೀಶರ ಅವಧಿ ವಿಸ್ತರಣೆ

ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಸೇವಾವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಸಂಬಂಧ ಉತ್ತರಪ್ರದೇಶ ಸರ್ಕಾರ ಹಾಗೂ ಹೈಕೋರ್ಟ್ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣದ ವಿಚಾರಣೆ ಅಂತ್ಯದವರೆಗೂ ಅವರ ಸೇವಾವಧಿ ವಿಸ್ತರಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ. ಈ ಹಿಂದೆ 2017ರ ಮೂಲ ಆದೇಶದಲ್ಲಿಯೂ ಇದೇ ರೀತಿ ಅಭಿಪ್ರಾಯ ತಿಳಿಸಿದ್ದ ನ್ಯಾಯಪೀಠ, ವಿಚಾರಣೆ ಅಂತ್ಯದವರೆಗೆ ವರ್ಗಾವಣೆ ಮಾಡದಿರುವಂತೆ ಹೇಳಿತ್ತು.