ಬಾಂಗ್ಲಾ ಕ್ರಿಕೆಟ್ ಆಟಗಾರರಿಂದ ಮುಷ್ಕರ

0
7

ಸಂಭಾವನೆಯಲ್ಲಿ ಏರಿಕೆ ಮತ್ತು ಸೌಲಭ್ಯಗಳಿಗೆ ಆಗ್ರಹಿಸಿ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಬಹುತೇಕ ಆಟಗಾರರು ಅಕ್ಟೋಬರ್ 21 ರ ಸೋಮವಾರ ಮುಷ್ಕರ ನಡೆಸಿದ್ದಾರೆ.

ಢಾಕಾ (ಎಎಫ್‌ಪಿ): ಸಂಭಾವನೆಯಲ್ಲಿ ಏರಿಕೆ ಮತ್ತು ಸೌಲಭ್ಯಗಳಿಗೆ ಆಗ್ರಹಿಸಿ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಬಹುತೇಕ ಆಟಗಾರರು  ಅಕ್ಟೋಬರ್ 21 ರ ಸೋಮವಾರ ಮುಷ್ಕರ ನಡೆಸಿದ್ದಾರೆ. ಹೀಗಾಗಿ ಮುಂದಿನ ತಿಂಗಳ ಭಾರತ ಪ್ರವಾಸದ ಮೇಲೆ ಅನಿಶ್ಚಿತತೆ ಆವರಿಸಿದೆ.

ಬಾಂಗ್ಲಾದೇಶ ನವೆಂಬರ್‌ 3ರಂದು ಆರಂಭವಾಗುವ ಭಾರತ ಪ್ರವಾಸದ ವೇಳೆ ಮೂರು ಟಿ–20 ಪಂದ್ಯಗಳನ್ನು ಮತ್ತು ಎರಡು ಟೆಸ್ಟ್‌ಗಳನ್ನು ಆಡಬೇಕಾಗಿದೆ. ಮೊದಲ ಟೆಸ್ಟ್‌ 14ರಂದು ಆರಂಭವಾಗಲಿದೆ.

ರಾಷ್ಟ್ರೀಯ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಪತ್ರಿಕಾಗೋಷ್ಠಿಯಲ್ಲಿ ಬೇಡಿಕೆಗಳ ಪಟ್ಟಿಯಿಟ್ಟು, ಮುಷ್ಕರ ನಡೆಸುವುದಾಗಿ ಘೋಷಿಸಿದರು. ‘ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಯಾವುದೇ ಕ್ರಿಕೆಟ್‌ ಚಟುವಟಿಕೆಯಲ್ಲಿ ತೊಡಗುವುದಿಲ್ಲ’ ಎಂದು ಶಕೀಬ್‌ ಹೇಳಿದರು. ಅವರ ಜೊತೆ ಹಾಲಿ ಮತ್ತು ಮಾಜಿ ಆಟಗಾರರಿದ್ದರು.

ಕ್ರಿಕೆಟ್‌ಗೆ ಕೊಡುಗೆ ನೀಡುವವರ ಜೊತೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಆದಾಯವನ್ನು ಸರಿಯಾಗಿ ಹಂಚುತ್ತಿಲ್ಲ ಎಂಬ ಟೀಕೆಗಳ ನಡುವೆಯೇ ಈ ಮುಷ್ಕರ ಆರಂಭವಾಗಿದೆ.

ಹೊರಗಿನ ಆಟಗಾರರಿಗೆ ಕೊಡುವಷ್ಟೇ ಹಣವನ್ನು ಸ್ಥಳೀಯ ಆಟಗಾರರು ಮತ್ತು ಕೋಚ್‌ಗಳಿಗೆ ನೀಡಬೇಕು ಎಂಬುದು ಇನ್ನೊಂದು ಬೇಡಿಕೆಯಾಗಿದೆ. ಮೊದಲ ದರ್ಜೆ ಆಟಗಾರರಿಗೆ ಶೇ 50ರಷ್ಟು ಸಂಭಾವನೆ ಹೆಚ್ಚಿಸಬೇಕು, ದೇಶಿಯ ನಾಲ್ಕು ದಿನಗಳ ಮತ್ತು ಏಕದಿನ ಪಂದ್ಯಗಳ ಸಂಭಾವನೆಯಲ್ಲಿ ಹೆಚ್ಚಳ ಮಾಡಬೇಕು ಎಂಬುದು ಇತರ ಬೇಡಿಕೆಗಳಾಗಿವೆ. ಸಮೃದ್ಧ ಆದಾಯದ ಮೂಲವಾಗಿರುವ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್ (ಬಿಪಿಎಲ್‌) ನಡೆಸಲು ಫ್ರಾಂಚೈಸ್‌ಗಳಿಗೆ ಅವಕಾಶ ನೀಡಬೇಕು ಎಂದೂ ಒತ್ತಾಯಿಸಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ನಿಗದಿಯಾಗಿರುವ ಬಿಪಿಎಲ್‌ನಿಂದ ಫ್ರಾಂಚೈಸ್‌ಗಳನ್ನು ದೂರವಿಡುವುದಾಗಿ ಬಿಸಿಬಿ ಕಳೆದ ತಿಂಗಳು ತಿಳಿಸಿತ್ತು. ಇದರಿಂದ ಪಂದ್ಯಸಂಭಾವನೆಗೆ ಕತ್ತರಿ ಬೀಳಬಹುದು ಎಂಬ ಆತಂಕ ಉಂಟಾಗಿತ್ತು.

‘ಆಡುವ ಪ್ರತಿ 11ರ ತಂಡದಲ್ಲಿ ಒಬ್ಬ ಲೆಗ್‌ ಸ್ಪಿನ್ನರ್ ಇರಬೇಕು’ ಎಂಬ ಷರತ್ತನ್ನೂ ಬಿಸಿಬಿ ಹೇರಿದೆ. ಆದೇಶ ಪಾಲಿಸದ ಕಾರಣ ಎರಡು ತಂಡಗಳ ಹೆಡ್‌ ಕೋಚ್‌ಗಳನ್ನೂ ಅದು ಅಮಾನತು ಮಾಡಿದೆ ಕೂಡ. ‘ಹೊಸ ನಿಯಮಗಳು ಕ್ರಿಕೆಟಿಗರನ್ನು ತುಳಿಯುತ್ತವೆ’ ಎಂದು ಶಕೀಬ್‌ ಟೀಕಿಸಿದ್ದಾರೆ.

‘ಆಟಗಾರರು ನಮಗೆ ಮುಖ್ಯ. ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಜಾಮುದ್ದೀನ್‌ ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.