ಬಳಕೆದಾರರ ಮಾಹಿತಿಗೆ ಶುಲ್ಕ ವಿಧಿಸಲು ಫೇಸ್‌ಬುಕ್‌ ಚಿಂತನೆ

0
355

ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ ಬಗ್ಗೆ ಫೇಸ್‌ಬುಕ್‌ ಚಿಂತನೆ ನಡೆಸಿದೆ.ಸದಸ್ಯರ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವ ನೀತಿಯನ್ನು ಫೇಸ್‌ಬುಕ್‌ ಬದಲಾಯಿಸಿಕೊಳ್ಳುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ ಬಗ್ಗೆ ಫೇಸ್‌ಬುಕ್‌ ಚಿಂತನೆ ನಡೆಸಿದೆ.

ಸದಸ್ಯರ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವ ನೀತಿಯನ್ನು ಫೇಸ್‌ಬುಕ್‌ ಬದಲಾಯಿಸಿಕೊಳ್ಳುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ಫೇಸ್‌ಬುಕ್‌ ಯಾವುದೇ ಸದಸ್ಯರ ಮಾಹಿತಿಯನ್ನು ಎಂದಿಗೂ ಮಾರಾಟ ಮಾಡಿಲ್ಲ. ನಮ್ಮ ಅಪ್ಲಿಕೇಷನ್‌ ಪ್ರೊಗ್ರಾಂ ಇಂಟರ್‌ಫೇಸ್‌ಗಳು (ಎಪಿಐ) ಉಚಿತವಾಗಿ ದೊರೆಯುತ್ತವೆ’‍ ಎಂದು ಕಂಪನಿಯ ಡೆವಲಪರ್‌ ಪ್ಲಾಟ್‌|ಫಾರ್ಮ್ಸ್‌ ಮತ್ತು ಪ್ರೊಗ್ರಾಂ ನಿರ್ದೇಶಕ ಕಾನ್‌ಸ್ಟಾಂಟಿನೊಸ್‌ ಪಾಪಾಮಿಲಿಯಿಡಿಸ್‌ ತಿಳಿಸಿದ್ದಾರೆ.

ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ ಬಗ್ಗೆ ಕಂಪನಿಯ ಆಂತರಿಕ ಇ–ಮೇಲ್‌ಗಳಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ, ಫೇಸ್‌ಬುಕ್‌ ವಿರುದ್ಧ  2015ರಲ್ಲಿ ‘ಸಿಕ್ಸ್‌4ಥ್ರಿ’ ಕಂಪನಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಿದ್ದ ಪ್ರತಿಕ್ರಿಯೆಯಲ್ಲೂ ಈ ವಿಷಯ ಉಲ್ಲೇಖಿಸಲಾಗಿತ್ತು ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ಬಳಕೆದಾರರ ಮಾಹಿತಿಯನ್ನು ಜಾಹೀರಾತುದಾರರಿಗೆ ನೀಡಬೇಕು. ಸಾಮಾಜಿಕ ಜಾಲತಾಣದ ಅಭಿವೃದ್ಧಿಗಾಗಿ ಮಾಡುವ ವೆಚ್ಚವನ್ನು ಇದರಿಂದ ಭರಿಸಬಹುದು ಎನ್ನುವ ಬಗ್ಗೆ ಕೆಲವು ಉದ್ಯೋಗಿಗಳು ಚರ್ಚಿಸಿದ್ದಾರೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2012ರಲ್ಲಿ ಫೇಸ್‌ಬುಕ್‌ ಷೇರು ಮಾರುಕಟ್ಟೆ ಪ್ರವೇಶಿಸಿತು. ಬಳಿಕ ಆದಾಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳತೊಡಗಿತು. ಆದರೆ, ಈ ಸಾಮಾಜಿಕ ಜಾಲತಾಣದಿಂದ ಮಾಹಿತಿ ಪಡೆಯುವ ಡೆವಲಪರ್‌ಗಳಿಗೆ ಶುಲ್ಕ ವಿಧಿಸದಂತೆ ನಿರ್ಧಾರ ಕೈಗೊಂಡಿತ್ತು.

ಕೇಂಬ್ರಿಜ್ ಅನಲಿಟಿಕಾ ಹಗರಣದ ಬಳಿಕ ಫೇಸ್‌ಬುಕ್‌ ಆ್ಯಪ್‌ ದತ್ತಾಂಶ ವಿನಿಯಮ ಮಾಡಿಕೊಳ್ಳುವ ನೀತಿಯನ್ನು ಬದಲಾಯಿಸಲಾಗಿತ್ತು. 8.7 ಕೋಟಿ ಬಳಕೆದಾರರ ದತ್ತಾಂಶವನ್ನು ಕೇಂಬ್ರಿಜ್ ಅನಲಿಟಿಕಾ ಕದ್ದಿರುವುದನ್ನು ಫೇಸ್‌ಬುಕ್‌ ಒಪ್ಪಿಕೊಂಡಿತ್ತು. ಈ ಸಂಸ್ಥೆ 2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪರ ಕಾರ್ಯನಿರ್ವಹಿಸಿತ್ತು.