ಬದೌರಿಯಾ ವಾಯುಪಡೆ ನೂತನ ಮುಖ್ಯಸ್ಥ

0
17

ಏರ್ ಮಾರ್ಷಲ್ ರಾಕೇಶ್ ಕುಮಾರ್ ಬದೌರಿಯಾ ಅವರನ್ನು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 19 ರ ಗುರುವಾರ ನೇಮಿಸಿದೆ.

ನವದೆಹಲಿ:  ಏರ್ ಮಾರ್ಷಲ್ ರಾಕೇಶ್ ಕುಮಾರ್ ಬದೌರಿಯಾ ಅವರನ್ನು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 19 ರ ಗುರುವಾರ ನೇಮಿಸಿದೆ. ಹಾಲಿ ಮುಖ್ಯಸ್ಥ ಬಿ.ಎಸ್.ದನೋವಾ ಇದೇ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ.

ಆಗ್ರಾ ಸಮೀಪದ ಬದೌರಿಯಾ ಎಂಬ ಹಳ್ಳಿಯಲ್ಲಿ ರಾಕೇಶ್ ಕುಮಾರ್ ಸಿಂಗ್ ಜನಿಸಿದ್ದರು. ಬದೌರಿಯಾ ಅವರು ಪರಮ್ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ ಪಡೆದಿದ್ದಾರೆ. ಬದೌರಿಯಾ ಅವರು ಪುಣೆಯಯಲ್ಲಿ ಮಾಸ್ಟರ್ ಇನ್ ಡಿಫೆನ್ಸ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ದರು. ಬಾಂಗ್ಲಾದೇಶದ ಕಮಾಂಡ್ ಅಂಡ್ ಸ್ಟಾಪ್ ಕಾಲೇಜಿನಲ್ಲಿ ರಕ್ಷಣಾ ಕಲಿಕೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. 

1980 ರಲ್ಲಿ ವಾಯುಪಡೆಯ ಯುದ್ದ ವಿಮಾನ ಹಾರಾಟ ವಿಭಾಗದಲ್ಲಿ ಸೇವೆ ಆರಂಭಿಸಿದ ಬದೌರಿಯಾ ಸದ್ಯ ವಾಯುಪಡೆಯ ಉಪಮುಖ್ಯಸ್ಥರಾಗಿದ್ದಾರೆ.. ದನೋವಾ ಅವರೊಂದಿಗೆ ಅವರೂ ಇದೇ ಸೆಪ್ಟೆಂಬರ್ 30 ರಂದು ನಿವೃತ್ತಿಯಾಗಬೇಕಿತ್ತು. ಆದರೆ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಬಡ್ತಿ ನೀಡಿರುವುದರಿಂದ ಇನ್ನೂ 2 ವರ್ಷ ಸೇವೆ ಸಲ್ಲಿಸಲು ಅವರಿಗೆ ಅವಕಾಶ ದೊರೆತಿದೆ.

ಬದೌರಿಯಾ ಅವರಿಗೆ 26 ರೀತಿಯ ಯುದ್ದ ವಿಮಾನ ಮತ್ತು ಸರಕು ಸಾಗಣೆ ವಿಮಾನಗಳಲ್ಲಿ ಒಟ್ಟು 4,250 ಗಂಟೆ ಹಾರಾಟದ ಅನುಭವವಿದೆ. ಬದೌರಿಯಾ ಅವರು ಫ್ರಾನ್ಸ್ ಜತೆ 36 ರಫೇಲ್ ಯುದ್ದ ವಿಮಾನದ ವ್ಯವಹಾರದಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.