ಬಡ್ಡಿ ರಹಿತ ಶೈಕ್ಷಣಿಕ ಸಾಲ ಯೋಜನೆ ಸ್ಥಗಿತ : ಕರ್ನಾಟಕ ರಾಜ್ಯ ಸರ್ಕಾರ

0
197

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ‘ರಾಜೀವ್ ಗಾಂಧಿ ಸಾಲ ರೂಪದ ವಿದ್ಯಾರ್ಥಿ ವೇತನ’ ಯೋಜನೆಯನ್ನು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಸ್ಥಗಿತಗೊಳಿಸಿದೆ.

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ‘ರಾಜೀವ್ ಗಾಂಧಿ ಸಾಲ ರೂಪದ ವಿದ್ಯಾರ್ಥಿ ವೇತನ’ ಯೋಜನೆಯನ್ನು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಸ್ಥಗಿತಗೊಳಿಸಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಬಡ್ಡಿ ರಹಿತ ಸಾಲ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿತ್ತು. ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಹಿಂದಿನ ಸರ್ಕಾರದ ಯಾವುದೇ ಯೋಜನೆಗಳನ್ನು ಕೈಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಯೋಜನೆಯನ್ನು ಈಗ ಸದ್ದಿಲ್ಲದೆ ನಿಲ್ಲಿಸಲಾಗಿದೆ. 

ರಾಜ್ಯ ಮಟ್ಟದ ಬ್ಯಾಂಕ್‌ಗಳ ಸಮಿತಿಯ(ಎಸ್‌ಎಲ್‌ಬಿಸಿ) ಸೆಪ್ಟಂಬರ್‌ ದಾಖಲೆಯ ಪ್ರಕಾರ, ಯೋಜನೆಯನ್ನು ಈ ವರ್ಷವೇ ಸ್ಥಗಿತಗೊಳಿಸಲಾಗಿದೆ. ‘ಬಡ್ಡಿ ರಹಿತ ಶಿಕ್ಷಣ ಸಾಲ ಯೋಜನೆ ಈಗ ಚಾಲ್ತಿಯಲ್ಲಿ ಇಲ್ಲ’ ಎಂದು ಎಸ್‌ಎಲ್‌ಬಿಸಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಈ ಯೋಜನೆಯನ್ನು 2013–14 ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಷಕ್ಕೆ 60,000 ವರೆಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿತ್ತು. ಟ್ಯೂಷನ್‌ ಶುಲ್ಕ,  ಪುಸ್ತಕಗಳು, ಉಪಕರಣಗಳು, ಹಾಸ್ಟೆಲ್‌ ಶುಲ್ಕಕ್ಕಾಗಿ ಈ ಸಾಲವನ್ನು ಬಳಸಬಹುದಾಗಿತ್ತು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ಮಿತಿಯೊಳಗಿನವರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದರು.

 ಈ ಯೋಜನೆಗೆ ವಿಜಯಬ್ಯಾಂಕ್‌ ಅನ್ನು ಲೀಡ್‌ ಬ್ಯಾಂಕ್ ಆಗಿ ಆಯ್ಕೆ ಮಾಡಲಾಗಿತ್ತು. ‘ಈ ಸಂಬಂಧ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ ಮುಗಿದಿದ್ದು, ಅದನ್ನು ನವೀಕರಣ ಮಾಡಿಲ್ಲ. ಸರ್ಕಾರ ನವೀಕರಣಕ್ಕೆ ಮುಂದಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿಜಯಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಯೋಜನೆ ಸ್ಥಗಿತಗೊಳಿಸಿಲ್ಲ’ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ಕಾಲೇಜು ಶಿಕ್ಷಣ ಆಯುಕ್ತೆ ಡಾ.ಎನ್‌.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆರಂಭದಿಂದಲೂ ಈ ಯೋಜನೆಯ ಪ್ರಯೋಜನ ಪಡೆದವರ ಸಂಖ್ಯೆ ಬಹಳ ಕಡಿಮೆ. 2014 ರಿಂದ ಇಲ್ಲಿಯವರೆಗೆ ಕೇವಲ 600 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.

ಸಾಲಕ್ಕೆ ಒಪ್ಪಿಗೆ ನೀಡುವ ಪ್ರಕ್ರಿಯೆ ಮಂದಗತಿಯಲ್ಲಿ ನಡೆಯುತ್ತಿರುವುದು ನಿಜ. ಕಳೆದ ವರ್ಷ 195 ಅರ್ಜಿಗಳಿಗೆ ನಾವು ಒಪ್ಪಿಗೆ ನೀಡಿದ್ದೆವು. ಆದರೆ, 71 ವಿದ್ಯಾರ್ಥಿಗಳಿಗೆ ಸಾಲ ಬಿಡುಗಡೆಯಾಗಿತ್ತು. ಉಳಿದ 106 ಅರ್ಜಿಗಳು ವಿವಿಧ ಬ್ಯಾಂಕುಗಳಲ್ಲಿ ಬಾಕಿ ಉಳಿದಿವೆ. ಇದರಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಮಂಜುಳಾ ವಿವರ ನೀಡಿದರು.

ಕಾಲೇಜು ಪ್ರಾಂಶುಲಪಾಲರೇ ವಿದ್ಯಾರ್ಥಿಗಳಿಂದ ಸಾಲದ ಅರ್ಜಿ ಪಡೆದು ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ಕಳುಹಿಸಬೇಕು.  ಸಾಲಕ್ಕೆ ಪ್ರಾಂಶುಪಾಲರೇ ಖಾತರಿ ನೀಡಬೇಕು.

ಒಂದು ವೇಳೆ ವಿದ್ಯಾರ್ಥಿ ಅಸಲು ಪಾವತಿಸದಿದ್ದರೆ, ಅದಕ್ಕೆ ಹೊಣೆಗಾರರು ಆಗುತ್ತೇವೆ ಎಂಬ ಮುಚ್ಚಳಿಕೆ ಬರೆದುಕೊಡಬೇಕಿತ್ತು. ಈ ಷರತ್ತುಗಳೂ ಯೋಜನೆಯ ವೈಫಲ್ಯಕ್ಕೆ ಕಾರಣ.