ಬಕ್ರೀದ್: ಸಾರ್ವಜನಿಕ ಪ್ರಾಣಿ ಬಲಿ ನಿಷೇಧಿಸಿದ ಯೋಗಿ ಸರಕಾರ

0
985

ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ನೀಡುವುದು ಹಾಗೂ ಬಲಿ ನೀಡಿದ ಪ್ರಾಣಿಗಳ ತ್ಯಾಜ್ಯವನ್ನು ಚರಂಡಿಗಳಲ್ಲಿ ಎಸೆಯುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಜಾಫರ್‌ನಗರ: ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ನೀಡುವುದು ಹಾಗೂ ಬಲಿ ನೀಡಿದ ಪ್ರಾಣಿಗಳ ತ್ಯಾಜ್ಯವನ್ನು ಚರಂಡಿಗಳಲ್ಲಿ ಎಸೆಯುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಬಹಿರಂಗವಾಗಿ ಪ್ರಾಣಿಗಳನ್ನು ಬಲಿ ನೀಡುವುದರಿಂದ ಇತರೆ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಿಎಂ ಸಮಜಾಯಿಷಿ ನೀಡಿದ್ದಾರೆ. 

ಶನಿವಾರ ರಾತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕಾನೂನು ಹಾಗೂ ಸುವ್ಯವಸ್ಥೆ ಕಾಯ್ದಕೊಳ್ಳುವ ನಿಟ್ಟಿನಲ್ಲಿ ಸಿಎಂ ಈ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮುಖ್ಯಮಂತ್ರಿಗಳ ಆದೇಶ ಪಾಲಿಸಲು ಬದ್ಧರಾಗಿದ್ದೇವೆ ಎಂದು ಖಚಿತಪಡಿಸಿರುವ ಮುಜಾಫರ್‌ನಗರ ಜಿಲ್ಲಾಧಿಕಾರಿ ರಾಜೀವ್ ಶರ್ಮಾ, ‘ಸಿಎಂ ಆದೇಶ ಸಂಬಂಧ ಜಿಲ್ಲೆಯ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ. ಬಕ್ರೀದ್ ಸಂಬಂಧ ಶಾಂತಿ-ವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉಭಯ ಸಮುದಾಯದ ಮುಖಂಡರ ಜತೆ ಸಭೆ ನಡೆಸುತ್ತೇವೆ’ ಎಂದು ತಿಳಿಸಿದ್ದಾರೆ. 

ಕಾನೂನು ಸುವ್ಯವಸ್ಥೆ ಮೇಲೆ ಕೇಂದ್ರೀಕರಿಸಿ ಆದೇಶ ಹೊರಡಿಸಿ ಹೊರಡಿಸಿರುವ ಮುಖ್ಯಮಂತ್ರಿ ಅವರು, ಬಕ್ರೀದ್ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುವಂತೆ ಕರೆ ನೀಡಿದ್ದಾರೆ. ಕೋಮು ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಬಹಿರಂಗವಾಗಿ ಪ್ರಾಣಿಗಳನ್ನು ಬಲಿ ಕೊಡಬಾರದು ಎಂದು ಸೂಚಿಸಿರುವುದಾಗಿ ಪೊಲೀಸ್ ಅಧೀಕ್ಷಕ ಓಂವೀರ್ ಸಿಂಗ್ ತಿಳಿಸಿದ್ದಾರೆ.