ಫೇಸ್‌ಬುಕ್‌ ಮಾಹಿತಿ ಸಂಗ್ರಹಕ್ಕೆ ಕಡಿವಾಣ

0
19

ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ ಪುಟದ ಜಾಹೀರಾತುಗಳ ನಿಯಂತ್ರಣ ಬಳಕೆದಾರರ ಕೈಯಲ್ಲಿರಲಿದೆ.

ಸ್ಯಾನ್‌ಫ್ರಾನ್ಸಿಸ್ಕೋ(ಎಪಿ): ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ ಪುಟದ ಜಾಹೀರಾತುಗಳ ನಿಯಂತ್ರಣ ಬಳಕೆದಾರರ ಕೈಯಲ್ಲಿರಲಿದೆ.

ಇಂತಹ ಜಾಹೀರಾತುಗಳ ಕಡಿವಾಣಕ್ಕೆ ಹೊಸ ಆಯ್ಕೆಯೊಂದು ಶೀಘ್ರ ಸೇರ್ಪಡೆಗೊಳ್ಳಲಿದೆ. ಈ ಕುರಿತು ಆಗಸ್ಟ್ 20 ರ ಮಂಗಳವಾರ ಪ್ರಕಟಣೆ ಹೊರಡಿಸಿರುವ ಕಂಪನಿ, ‘ಫೇಸ್‌ಬುಕ್‌ ಪುಟದಲ್ಲಿ ಬರುವಂತಹ ಸುದ್ದಿ, ವಿಡಿಯೊ, ಚಿತ್ರಗಳನ್ನು ಲೈಕ್‌ ಮಾಡಿದಾಗ ಆ ವಿಷಯಕ್ಕೆ ಸಂಬಂಧಿಸಿದಂತಹ ಜಾಹೀರಾತುಗಳು ಪುಟದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಮುಂದೆ ಇಂತಹ ಟ್ರ್ಯಾಕಿಂಗ್‌ ಅನ್ನು ನಿಷೇಧಿಸುವ ಆಯ್ಕೆ ಸೇರ್ಪಡೆಗೊಳಿಸುತ್ತೇವೆ. ‘ಕ್ಲಿಯರ್‌ ಹಿಸ್ಟರಿ’ ಬದಲಾಗಿ ‘ಆಫ್‌–ಫೇಸ್‌ಬುಕ್‌  ಆ್ಯಕ್ಟಿವಿಟಿ’ ಎಂಬ ಆಯ್ಕೆ ದೊರೆಯಲಿದೆ. 

ಉತ್ತರ ಕೊರಿಯಾ, ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಮಂಗಳವಾರ ಇದನ್ನು ಸೇರ್ಪಡೆಗೊಳಿಸಲಾಗಿದ್ದು, ಉಳಿದ ದೇಶಗಳಲ್ಲಿ ಮುಂದಿನ ತಿಂಗಳಿಂದ ಲಭ್ಯವಾಗಲಿದೆ. ಸೆಟ್ಟಿಂಗ್ಸ್‌ನಲ್ಲಿ ಯುವರ್‌ ಫೇಸ್‌ಬುಕ್‌ ಇನ್ಫಾರ್ಮೇಷನ್‌ ಎಂಬ ಆಯ್ಕೆಯಡಿ ‘ಆಫ್‌–ಫೇಸ್‌ಬುಕ್‌ ಆ್ಯಕ್ಟಿವಿಟಿ’ ಲಭ್ಯವಿದೆ. 

‘ಆಫ್–ಫೇಸ್‌ಬುಕ್‌ ಆ್ಯಕ್ಟಿವಿಟಿ’ ಆಯ್ಕೆ ಮಾಡಿದ ನಂತರ, ವ್ಯಕ್ತಿಯೊಬ್ಬ ಯಾವುದಾದರೂ ಜಾಹೀರಾತನ್ನು ವೀಕ್ಷಿಸಿದರೆ ಯಾರು ವೀಕ್ಷಿಸಿದರು ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ಒಬ್ಬರು ಈ ಜಾಹೀರಾತು ವೀಕ್ಷಿಸಿದ್ದಾರೆ ಎನ್ನುವುದು ತಿಳಿಯಲಿದೆ.

ಆದಾಯ ಇಳಿಕೆ?

ಹೊಸ ಆಯ್ಕೆಯಿಂದಾಗಿ ಫೇಸ್‌ಬುಕ್ ಜಾಹೀರಾತು ಆದಾಯ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಫೇಸ್‌ಬುಕ್‌ನ ಉತ್ಪನ್ನ ವ್ಯವಸ್ಥಾಪಕ ಸ್ಟೀಫೈನ್‌ ಮ್ಯಾಕ್ಸ್‌ ತಿಳಿಸಿದ್ದಾರೆ. ‘ಆದಾಯಕ್ಕಿಂತ ಜನರ ಖಾಸಗಿತನ ಮತ್ತು ಅವರ ಕೈಗೆ ನಿಯಂತ್ರಣ ನೀಡುವುದೇ ಮುಖ್ಯ’ ಎಂದಿದ್ದಾರೆ.