ಫೇಸ್‌ಬುಕ್‌ನ ಸ್ವಂತ ಕರೆನ್ಸಿ ‘ಲಿಬ್ರಾ’

0
28

ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌, ತನ್ನದೇ ಆದ ಕರೆನ್ಸಿ ಚಲಾವಣೆಗೆ ತರಲು ಉದ್ದೇಶಿಸಿದೆ.

ಸ್ಯಾನ್‌ಫ್ರಾನ್ಸಿಸ್ಕೊ (ಎಪಿ): ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌, ತನ್ನದೇ ಆದ ಕರೆನ್ಸಿ ಚಲಾವಣೆಗೆ ತರಲು ಉದ್ದೇಶಿಸಿದೆ.

ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ ಮಾದರಿಯಲ್ಲಿ  ಜಾಗತಿಕ ಬಳಕೆಗಾಗಿ ಹೊಸ ಕರೆನ್ಸಿ ಸೃಷ್ಟಿಸಿ ಚಲಾವಣೆಗೆ ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಸ್ಥೆಯು ಜೂನ್ 18 ರ ಮಂಗಳವಾರ ಪ್ರಕಟಿಸಿದೆ. ಇದರಿಂದ ಫೇಸ್‌ಬುಕ್‌ ತಾಣದಲ್ಲಿ ಇ–ಕಾಮರ್ಸ್‌ ವಹಿವಾಟು ಮತ್ತು ಜಾಹೀರಾತುಗಳು ಹೆಚ್ಚಳಗೊಳ್ಳಬಹುದು ಎನ್ನುವುದು ಅದರ ನಿರೀಕ್ಷೆಯಾಗಿದೆ.

ಪೇ–ಪಲ್‌, ಉಬರ್‌, ಸ್ಪೂಟಿಫೈ, ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗಳ ಸಹಯೋಗದಲ್ಲಿ ಈ ಡಿಜಿಟಲ್‌ ಕರೆನ್ಸಿ ಬಳಕೆಗೆ ತರಲು ಮುಂದಾಗಿದೆ.

ಲಿಬ್ರಾ: ಮುಂದಿನ 6 ರಿಂದ 12 ತಿಂಗಳಲ್ಲಿ ಚಲಾವಣೆಗೆ ಬರಲಿರುವ ಡಿಜಿಟಲ್‌ ಕರೆನ್ಸಿಗೆ ‘ಲಿಬ್ರಾ’ (Libra) ಎಂದು ಹೆಸರಿಡಲಾಗಿದೆ.

ಫೇಸ್‌ಬುಕ್‌ನ 12ಕ್ಕೂ ಹೆಚ್ಚು ಪಾಲುದಾರರು ಈ ಕರೆನ್ಸಿ ಬಳಕೆಗೆ ತರಲು ನೆರವಾಗುತ್ತಿದ್ದಾರೆ. ಈ ಪ್ರಯತ್ನಕ್ಕೆ ಬೇಕಾದ 700 ಕೋಟಿ ನೆರವು ಸುಲಭವಾಗಿ ದೊರೆಯಲಿದೆ ಎಂದು ಫೇಸ್‌ಬುಕ್‌ ನಿರೀಕ್ಷಿಸಿದೆ.

 ‘ಲಿಬ್ರಾ’ ವರ್ಗಾವಣೆಗೆ ಹೆಚ್ಚಿನ ಶುಲ್ಕದ ಹೊರೆ ಬೀಳುವುದಿಲ್ಲ. ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್‌ ಕಾರ್ಡ್‌ ಹೊಂದಿರದ ಲಕ್ಷಾಂತರ ಬಳಕೆದಾರರು ‘ಲಿಬ್ರಾ’ ಬಳಸಿ ಇ–ಕಾಮರ್ಸ್‌ ವಹಿವಾಟು ನಡೆಸುವುದು ಸುಲಭವಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.