ಫೇಸ್​ಬುಕ್​ ಮೇಲೆ ಮಹಾ ದಾಳಿ: 5 ಕೋಟಿ ಖಾತೆಗಳಿಗೆ ಹ್ಯಾಕರ್​ಗಳ ಲಗ್ಗೆ!

0
586

ಸರಿ ಸುಮಾರು 50 ಮಿಲಿಯನ್​ ( 5 ಕೋಟಿ) ಫೇಸ್​ ಬುಕ್​ ಖಾತೆಗಳಿಗೆ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ ಎಂದು ಫೇಸ್​ಬುಕ್ ಸೆಪ್ಟೆಂಬರ್ 28 ರ​ ಶುಕ್ರವಾರ ಬಹಿರಂಗಗೊಳಿಸಿದೆ. ಭದ್ರತಾ ಲೋಪದಿಂದಾದ ಪ್ರಮಾದ ಎಂದು ಸ್ವತಃ ಫೇಸ್​ಬುಕ್​ನ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಅವರೇ ಘೋಷಿಸಿದ್ದಾರೆ.

ಮೆನ್ಲೋ ಪಾರ್ಕ್​ (ಅಮೆರಿಕ): ಸರಿ ಸುಮಾರು 50 ಮಿಲಿಯನ್​ ( 5 ಕೋಟಿ) ಫೇಸ್​ ಬುಕ್​ ಖಾತೆಗಳಿಗೆ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ ಎಂದು ಫೇಸ್​ಬುಕ್ ಸೆಪ್ಟೆಂಬರ್ 28 ರ​ ಶುಕ್ರವಾರ ಬಹಿರಂಗಗೊಳಿಸಿದೆ. ಭದ್ರತಾ ಲೋಪದಿಂದಾದ ಪ್ರಮಾದ ಎಂದು ಸ್ವತಃ ಫೇಸ್​ಬುಕ್​ನ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಅವರೇ ಘೋಷಿಸಿದ್ದಾರೆ.ಹೀಗಾಗಿ ಅತ್ಯಂತ ಹೆಚ್ಚು ಫೇಸ್​ಬುಕ್​ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಆತಂಕ ಹೆಚ್ಚಾಗಿದೆ.

ಮಿಕ್ಕುಳಿದ ಅಕೌಂಟ್​ಗಳಿಗೆ ಯಾವುದೇ ಹಾನಿಯಾಗದಂತೆ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿಯೂ, ಹಾನಿಗೊಳಗಾಗಲಿದ್ದ 4 ಕೋಟಿ ಅಕೌಂಟ್​ಗಳನ್ನು ರಕ್ಷಿಸಿರುವುದಾಗಿಯೂ ಮಾರ್ಕ್​ ಜುಕರ್​​ಬರ್ಗ್​ ಶುಕ್ರವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಮಾರ್ಕ್​ ಜುಕರ್​ಬರ್ಗ್​ ಅವರು, ಯಾವ ದೇಶದಿಂದ ಎಷ್ಟು ಅಕೌಂಟ್​ಗಳು ಸದ್ಯ ಹಾನಿಗೀಡಾಗಿವೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ಸದ್ಯ ಜಗತ್ತಿನಾದ್ಯಂತ 20.30 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​ ಭಾರತವೊಂದರಲ್ಲೇ 2.70 ಕೋಟಿ ಬಳಕೆದಾರನ್ನು ಹೊಂದಿದೆ. ಹೀಗಾಗಿ ಭಾರತದ ಅಕೌಂಟ್​ಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಳಿವೆ ಎಂದು ನಂಬಲಾಗಿದೆ. ಆದರೆ, ಭಾರತದಲ್ಲಿ ಎಷ್ಟು ಖಾತೆಗಳು ಹಾನಿಗೀಡಾಗಿವೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

“ಫೇಸ್​​ಬುಕ್​ನ 5 ಕೋಟಿ ಅಕೌಂಟ್​ಗಳಿಗೆ ಹ್ಯಾಕರ್​ಗಳು ಖನ್ನ ಹಾಕಿರುವ ಬಗ್ಗೆ ನಮ್ಮ ಎಂಜಿನಿಯರ್​ಗಳು ಸೆ. 25ರಂದು ಪತ್ತೆ ಹಚ್ಚಿದ್ದರು. ನಮ್ಮಲ್ಲಿನ ಲೋಪವನ್ನೇ ದಾರಿಮಾಡಿಕೊಂಡಿರುವ ಹ್ಯಾಕರ್​ಗಳು ದುಷ್ಕೃತ್ಯವೆಸಗಿದ್ದಾರೆ. ಬಳಕೆದಾರ ತಮ್ಮ ಫೇಸ್​ಬುಕ್​ ಖಾತೆ ಇತರ ಬಳಕೆದಾರರಿಗೆ ಹೇಗೆ ಕಾಣಲಿದೆ ಎಂಬುದನ್ನು ಪರಿಶೀಲಿಸಲು ಬಳಸುವ ‘View As’ ವ್ಯವಸ್ಥೆಯ ಮೇಲೆ ಹ್ಯಾಕರ್​ಗಳು ದಾಳಿ ಮಾಡಿದ್ದಾರೆ. ‘View As’ ವ್ಯವಸ್ಥೆಯಲ್ಲಿನ ಲೋಪದ ಲಾಭ ಪಡೆದಿರುವ ಹ್ಯಾಕರ್​ಗಳು ಕೆಲ ಅಕೌಂಟ್​ಗಳ ಆಕ್ಸೆಸ್​ (ಪ್ರವೇಶ) ಟೋಕನ್​ಗಳನ್ನು ಕದ್ದಿದ್ದಾರೆ. ಈ ಮೂಲಕ ದಾಳಿಕೋರ ಹ್ಯಾಕರ್​ಗಳು ಬಳೆಕೆದಾರರ ಅಕೌಂಟ್​ಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಅಥವಾ ಪ್ರವೇಶ ಸಾಧಿಸುತ್ತಿದ್ದಾರೆ,” ಎಂದು ಜುಕರ್​ ಬರ್ಗ್​ ತಿಳಿಸಿದ್ದಾರೆ.

ಈ ಮಹಾ ಹ್ಯಾಕ್​ನ ಬಗ್ಗೆ ಫೇಸ್​ಬುಕ್​ ಈಗಷ್ಟೇ ತನಿಖೇ ಆರಂಭಿಸಿದೆ. ಹ್ಯಾಕರ್​ಗಳು ಯಾರು, ಖಾತೆಗಳೇನಾದರೂ ದುರ್ಬಳಕೆಯಾಗಿವೆಯೇ ಎಂಬುದರ ಕುರಿತು ನಮಗೂ ಮಾಹಿತಿ ಲಭ್ಯವಾಗಿಲ್ಲ ಎಂದು ಜುಕರ್​ಬರ್ಗ್​ ತಿಳಿಸಿದ್ದಾರೆ.

ಇತರ ಆ್ಯಪ್​ಗಳು ಹ್ಯಾಕ್​ ! 

ಇನ್ನೊಂದೆಡೆ ಫೇಸ್​ಬುಕ್​ನಿಂದ ಬಳಕೆಯಾಗುತ್ತಿರುವ ಇತರ ಆ್ಯಪ್​ಗಳ ಮೇಲೆಯೂ ಹ್ಯಾಕರ್​ಗಳು ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಫೇಸ್​ಬುಕ್​ನ ಉತ್ಪಾದಕ ವ್ಯವಸ್ಥಾಪಕ ವಿಭಾಗದ ಉಪಾಧ್ಯಕ್ಷ ಗಾಯ್​ ರೋಸನ್​ ತಿಳಿಸಿದ್ದಾರೆ. ಈಗ ಹಾನಿಗೊಳಗಾಗಿರುವ ಅಕೌಂಟ್​ಗಳ ಬಳಕೆದಾರರೇನಾದರೂ ತಮ್ಮ ಫೇಸ್​ಬುಕ್​ ಖಾತೆಯನ್ನೇ ಇತರ ಆ್ಯಪ್​ಗಳಿಗೂ ಲಿಂಕ್​ ಮಾಡಿದ್ದರೆ, ಆ ಆ್ಯಪ್​ಗಳೂ ಸಮಸ್ಯೆಗೆ ಗುರಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ನಿಮಗೂ ಈ ಅನುಭವ ಆಗಿರಬಹುದು!

ಹ್ಯಾಕರ್​ಗಳು ಖಾತೆಗಳಿಗೆ ಕನ್ನ ಹಾಕುವುದನ್ನು ತಡೆಯುವ ಸಲುವಾಗಿ ಕೆಲ ಅಕೌಂಟ್​ಗಳನ್ನು ಫೇಸ್​ಬುಕ್​ ಉದ್ದೇಶ ಪೂರ್ವಕವಾಗಿಯೇ ಸತತವಾಗಿ ಲಾಗೌಟ್​ ಮಾಡುತ್ತಿದೆ. ಹಾಗಾದಾಗ ಬಳಕೆದಾರರು ಪುನಃ ತಮ್ಮ ಪಾಸ್​ವರ್ಡ್​ ನಮೂದಿಸಿ ಲಾಗಿನ್​ ಆಗಬೇಕಾಗುತ್ತದೆ. ಈ ಕುರಿತು ಫೇಸ್​ಬುಕ್​ ಈಗಾಗಲೇ ಬಳಕೆದಾರರಿಗೆ ಮಾಹಿತಿ ನೀಡಿದೆ. ಅಲ್ಲದೆ, ಹಲವು ಬಳಕೆದಾರರು ಸೆಪ್ಟೆಂಬರ್ 28 ರ ಶುಕ್ರವಾರದಿಂದೀಚೆಗೆ ಈಗಾಗಲೇ ಹಲವು ಬಾರಿ ಲಾಗಿನ್​ ಆಗಿರುವ ಬಗ್ಗೆ ಫೇಸ್​ಬುಕ್​ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.