ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

0
15

2019ರ ಮಾರ್ಚ್​ 31ರ ಅಂತ್ಯದ ವೇಳೆಗೆ ಆದಾಯ ತೆರಿಗೆ ಇಲಾಖೆ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ಸಂಗ್ರಹಿಸಿದೆ.

ನವದೆಹಲಿ: ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್​ನೆಟ್​ ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ಸಾಮಾಜಿಕ ಜಾಲತಾಣಗಳು, ಗೂಗಲ್​ ಮೂಲಕ ಹೆಚ್ಚಿನ ಜಾಹೀರಾತು ನೀಡುತ್ತಿವೆ. ಹೀಗೆ ಇಂಟರ್​ನೆಟ್​ನಲ್ಲಿ ನೀಡುತ್ತಿರುವ ಡಿಜಿಟಲ್​ ಜಾಹೀರಾತುಗಳಿಂದ ಕೇಂದ್ರ ಸರ್ಕಾರಕ್ಕೂ ಭರ್ಜರಿ ಆದಾಯ ಹರಿದು ಬರುತ್ತಿದೆ.

2019ರ ಮಾರ್ಚ್​ 31ರ ಅಂತ್ಯದ ವೇಳೆಗೆ ಆದಾಯ ತೆರಿಗೆ ಇಲಾಖೆ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ಸಂಗ್ರಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 590 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯದಲ್ಲಿ ಬಾರಿ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲ್​ ಮಾರ್ಕೆಟಿಂಗ್​ ಮತ್ತು ಡಿಜಿಟಲ್​ ಜಾಹೀರಾತು ಪ್ರಮಾಣ ಏರುಗತಿಯಲ್ಲಿದೆ. ಕಳೆದ ಒಂದು ವರ್ಷದಲ್ಲಿ ಡಿಜಿಟಲ್​ ಜಾಹೀರಾತುಗಳ ಮೇಲಿನ ತೆರಿಗೆ ಸಂಗ್ರಹ ಶೇ. 59ರಷ್ಟು ಹೆಚ್ಚಳ ಕಂಡಿದೆ.

ಭಾರತೀಯ ಕಂಪನಿಗಳು ಫೇಸ್​ಬುಕ್​ ಮತ್ತು ಗೂಗಲ್​ನಲ್ಲಿ ಜಾಹೀರಾತು ನೀಡಲು 2018-19ರ ಆರ್ಥಿಕ ವರ್ಷದಲ್ಲಿ ಸುಮಾರು 15,650 ಕೋಟಿ ರೂ. ವ್ಯಯಿಸಿವೆ. 2017-18ರಲ್ಲಿ 9,800 ಕೋಟಿ ರೂ.ಗಳನ್ನು ಕಂಪನಿಗಳು ಡಿಜಿಟಲ್​ ಜಾಹೀರಾತಿಗಾಗಿ ವ್ಯಯಿಸಿದ್ದವು. ಇದರಿಂದಾಗಿ ಡಿಜಿಟಲ್​ ಜಾಹೀರಾತುಗಳ ಮೇಲೆ ಜಿಎಸ್​ಟಿ ಸಂಗ್ರಹ ಹೆಚ್ಚಿದೆ.

ಸ್ಮಾರ್ಟ್​ಫೋನ್​ಗಳು ಮತ್ತು ಇಂಟರ್​ನೆಟ್​ನ ವ್ಯಾಪಕ ಬಳಕೆಯಿಂದಾಗಿ ದೇಶದಲ್ಲಿ ಡಿಜಿಟಲ್​ ಆರ್ಥಿಕತೆ ಏರುಗತಿಯಲ್ಲಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್​ ಆರ್ಥಿಕತೆಯ ಪ್ರಮಾನ ಸುಮಾರು 200 ಬಿಲಿಯನ್​ ಡಾಲರ್​ ಇದ್ದು, 2025ರ ವೇಳೆಗೆ ಇದು 1 ಟ್ರಿಲಿಯನ್​ ಡಾಲರ್​ಗೆ ಏರಿಕೆಯಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.