ಪ್ರಧಾನಿ ಮೋದಿ ಮೇಲೆ ರಾಸಾಯನಿಕ ದಾಳಿ ಬೆದರಿಕೆ: ಸೆಕ್ಯೂರಿಟಿ ಗಾರ್ಡ್​ ಬಂಧನ

0
20

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಸೆಕ್ಯೂರಿಟಿ ಗಾರ್ಡ್​ ಒಬ್ಬನನ್ನು ಬಂಧಿಸಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಸೆಕ್ಯೂರಿಟಿ ಗಾರ್ಡ್​ ಒಬ್ಬನನ್ನು ಬಂಧಿಸಿದ್ದಾರೆ.

ಜುಲೈ 27 ರ ಶುಕ್ರವಾರ ಸಂಜೆ 5.33 ಕ್ಕೆ ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ)ಯ ಕಂಟ್ರೋಲ್​ ರೂಂ.ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿಯ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಎನ್​ಎಸ್​ಜಿ ಪಡೆ ಕರೆ ಬಂದಿದ್ದ ದೂರವಾಣಿ ಸಂಖ್ಯೆಯ ಬೆನ್ನತ್ತಿತ್ತು. ಕರೆ ಮುಂಬೈನಿಂದ ಬಂದಿದ್ದು ತಿಳಿದು ಬಂದಿತ್ತು.

ಆ ನಂತರ ಎನ್​ಎಸ್​ಜಿ ಪಡೆ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಪೊಲೀಸರು ಜಾರ್ಖಂಡ್​ ಮೂಲದ ಕಾಶಿನಾಥ್​ ಮಂಡಲ್​ ಎಂಬಾತನನ್ನು ಬಂಧಿಸಿದ್ದಾರೆ. ಈತ ಮುಂಬೈನ ವಾಕೇಶ್ವರ್​ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ. ಕರೆ ಮಾಡಿದ ನಂತರ ಆತ ಸೂರತ್​ಗೆ ಹೋಗುವ ರೈಲು ಹತ್ತಲು ಮುಂಬೈ ಸೆಂಟ್ರಲ್​ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ. ಅಲ್ಲಿ ಆತನನ್ನು ಬಂಧಿಸಲಾಗಿದೆ.

ವಿಚಾರಣೆಯಲ್ಲಿ ಈತ ಎನ್​ಎಸ್​ಜಿ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಸಮಾಜದಲ್ಲಿ ಭಯದ ವಾತಾವರಣ ಮೂಡಿಸಲು, ಕೋಮು ಗಲಭೆ ಸೃಷ್ಟಿಸಲು ಮತ್ತು ಭಾರತೀಯರ ಮಧ್ಯೆ ಶತೃತ್ವವನ್ನು ಹುಟ್ಟಿಹಾಕಲು ನಾನು ಈ ಕೆಲಸ ಮಾಡಿದೆ ಎಂದು ತಿಳಿಸಿರುವುದಾಗಿ ಪೊಲೀಸರ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)