ಪ್ರಧಾನಿ ಮೋದಿ ಆಫ್ರಿಕಾ ಪ್ರವಾಸ: ರುವಾಂಡಾದ ಹಳ್ಳಿಗೆ 200 ಭಾರತೀಯ ಗೋವುಗಳ ಉಡುಗೊರೆ

0
14

ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಅವಧಿಯ ಆಫ್ರಿಕಾ ಖಂಡದ ಮೂರು ರಾಷ್ಟ್ರಗಳ ಪ್ರವಾಸವನ್ನು ಸೋಮವಾರ ಆರಂಭಿಸಿದ್ದು, ಮೊದಲ ಹೆಜ್ಜೆಯಾಗಿ ರುವಾಂಡಕ್ಕೆ ಭೇಟಿ ನೀಡಿದ್ದಾರೆ.

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಅವಧಿಯ ಆಫ್ರಿಕಾ ಖಂಡದ ಮೂರು ರಾಷ್ಟ್ರಗಳ ಪ್ರವಾಸವನ್ನು ಜುಲೈ 23 ರ ಸೋಮವಾರ ಆರಂಭಿಸಿದ್ದು, ಮೊದಲ ಹೆಜ್ಜೆಯಾಗಿ ರುವಾಂಡಕ್ಕೆ ಭೇಟಿ ನೀಡಿದ್ದಾರೆ. 

ರಾಜಧಾನಿ ದಿಲ್ಲಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ರುವಾಂಡಕ್ಕೆ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. 

ಭಾರತದ ವಿದೇಶಾಂಗ ನೀತಿಯಲ್ಲಿ ಆಫ್ರಿಕಾ ಗರಿಷ್ಠ ಆದ್ಯತೆ ಪಡೆದಿದೆ. ರುವಾಂಡಾ, ಉಗಾಂಡಾ ಮತ್ತು ದಕ್ಷಿಣ ಆಫ್ರಿಕಾ ಭೇಟಿಯಿಂದ ಆಫ್ರಿಕಾ ಖಂಡದ ಜತೆ ಭಾರತದ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿದೆ’ ‘ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ಕಳೆದ ಕೆಲವು ವರ್ಷಗಳಿಂದ ಆಫ್ರಿಕಾ ದೇಶಗಳ ಜತೆ ನಾನಾ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ಅವರು 23 ಬಾರಿ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ  ಮೋದಿ ಅವರು ಆಫ್ರಿಕಾದ ಪ್ರಧಾನ ಭೂಮಿಗೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. 2016ರಲ್ಲಿ ಪ್ರಧಾನಿ ಮೋದಿ ಅವರು ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಮತ್ತು ಕೀನ್ಯಾಗೆ ಭೇಟಿ ನೀಡಿದ್ದರು. 

ರುವಾಂಡಾ ಮತ್ತು ಭಾರತದ ಪರಿಸ್ಥಿತಿಗಳಲ್ಲಿ ಹಲವು ಸಾಮ್ಯತೆಗಳಿವೆ. ಅವುಗಳೆಂದರೆ- 

ಮಹಿಳಾ ಶಕ್ತಿ: ರುವಾಂಡಾದ ಸಂಸತ್ತಿನಲ್ಲಿ ಸುಮಾರು ಮೂರನೇ ಎರಡು ಭಾಗ ಮಹಿಳೆಯರೇ ಇದ್ದಾರೆ. ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಮಹಿಳಾ ಸಂಸದರು ಅಲ್ಲಿದ್ದಾರೆ. ಅದೇ ರೀತಿ ಭಾರತದಲ್ಲಿ, ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲು ಒದಗಿಸಲು ಬಹಳಷ್ಟು ಹೋರಾಟವನ್ನೇ ಮಾಡಲಾಗಿದೆ. 

ಗೋವುಗಳಿಗೆ ಪೂಜ್ಯ ಸ್ಥಾನ: ಪ್ರಧಾನಿ ಮೋದಿ ಅವರು ರುವಾಂಡಾ ಭೇಟಿ ವೇಳೆ ಆ ದೇಶಕ್ಕೆ 200 ದೇಶೀ ಗೋವುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ರುವಾಂಡಾದಲ್ಲಿ ಗೋಪಾಲನೆಯೇ ಪ್ರಮುಖವಾಗಿದ್ದು, ಪ್ರತಿ ಕುಟುಂಬ ಗೋವುಗಳಿಗೆ ಜನಿಸುವ ಮೊದಲ ಹೆಣ್ನು ಕರುವನ್ನು ನೆರೆಮನೆಯ ಬಡವರಿಗೆ ದಾನ ಮಾಡುವ ಮೂಲಕ ಜೀವನೋಪಾಯ ಕಲ್ಪಿಸುವ ಪರಂಪರೆಯಿದೆ. ಅಲ್ಲಿನ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯನ್ನು ಸ್ವತಃ ಅಧ್ಯಕ್ಷರೇ ಚಾಲನೆಗೊಳಿಸಿದ್ದಾರೆ. 

ರಾಜಧಾನಿ: ರುವಾಂಡಾದ ರಾಜಧಾನಿ ಕಿಗಾಲಿಯಿಂದ ಭಾರತದ ಮೆಟ್ರೋ ನಗರಗಳು, ನಿರ್ದಿಷ್ಟವಾಗಿ ದಿಲ್ಲಿ ಕಲಿಬಹುದಾದ ಪಾಠಗಳಿವೆ. ಸ್ವಚ್ಛತೆ ಮತ್ತು ಸಾರ್ವಜನಿಕ ಸಾರಿಗೆಯ ಸಮಯಪಾಲನೆ ವಿಚಾರದಲ್ಲಿ ಭಾರತ ರುವಾಂಡದ ರಾಜಧಾನಿಯಿಂದ ಪ್ರೇರಣೆ ಪಡೆಯಬಹುದಾಗಿದೆ. 

ಪೂರ್ವ ಆಫ್ರಿಕಾದ ಹೆಬ್ಬಾಗಿಲು: ಕಳೆದ ವರ್ಷದ ಜನವರಿಯಲ್ಲಿ ಭಾರತ ರುವಾಂಡಾದ ಜತೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವ ಒಪ್ಪಂದ ಮಾಡಿಕೊಂಡಿತು. ರುವಾಂಡಾಗೆ ಭಾರತ 40 ಕೋಟಿ ಡಾಲರ್‌ ನೆರವು ನೀಡಿದೆ. ಅಲ್ಲದೆ ಅಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ.