ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಬಂದ್

0
16

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ. ಈ ಹಿನ್ನೆಲೆ ಹಲವು ರೈತರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲೂ ಬಂದ್ ನಡೆಯಲಿದೆ ಎಂದು ಒಕ್ಕೂಟದ ನಾಯಕ ಸೋಮಶೇಖರ್ ಕೊತ್ತಂಬರಿ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರುಹುಬ್ಬಳ್ಳಿ:  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ. ಈ ಹಿನ್ನೆಲೆ ಹಲವು ರೈತರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲೂ ಬಂದ್ ನಡೆಯಲಿದೆ ಎಂದು ಒಕ್ಕೂಟದ ನಾಯಕ ಸೋಮಶೇಖರ್ ಕೊತ್ತಂಬರಿ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ್ದಾರೆ. 

ಸಿಎಂ ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದ ನಾಯಕರ ವಿರುದ್ಧ ಇತ್ತೀಚೆಗೆ ಸಿಎಂ ಹೇಳಿದ ಮಾತುಗಳು ಈ ಪ್ರತಿಭಟನೆಯನ್ನು ಪ್ರಚೋದಿಸುವಂತೆ ಮಾಡಿದೆ ಎನ್ನಲಾಗಿದೆ. ಇನ್ನು, ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸಹ ಬಂದ್‌ಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರ‍್ಯಾಲಿಯನ್ನು ಆಯೋಜನೆ ಮಾಡಿದ್ದು, ಉತ್ತರ ಕರ್ನಾಟಕ ಪ್ರದೇಶದ ನಾಯಕರು ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಜತೆಗೆ, ಸುವರ್ಣ ಸೌಧದ ಬಳಿ ಭಾಷಣ ಮಾಡಲಿದ್ದಾರೆ. 

ಕಳೆದ 7 ದಶಕಗಳಿಂದ ಎಲ್ಲ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದು, ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯ ಸರಕಾರಗಳು ಈ ಪ್ರದೇಶವನ್ನು ಅಭಿವೃದ್ಧಿ ಮಾಡಿಲ್ಲ ಎಂದು ಕೊತ್ತಂಬರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದ್ದರೂ ಸಹ ನಿರುದ್ಯೋಗ ಸೇರಿ ಇತರೆ ಸಮಸ್ಯೆಗಳನ್ನು ಸರಕಾರಗಳು ಬಗೆಹರಿಸಿಲ್ಲ. ಜತೆಗೆ ನಂಜುಂಡಪ್ಪ ಸಮಿತಿ ವರದಿಯ ಶಿಫಾರಸುಗಳನ್ನು ಸರಕಾರ ನಿರ್ಲಕ್ಷ್ಯ ಮಾಡಿರುವುದರಿಂದ, ಉತ್ತರ ಕರ್ನಾಟಕದಲ್ಲಿ ಬಡತನ ಹೆಚ್ಚಾಗಿದೆ ಎಂದು ಸಹ ಹೇಳಿದ್ದಾರೆ. 

ಅಲ್ಲದೆ, ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲು 2006ರಲ್ಲಿ ರಾಜ್ಯ ಸರಕಾರವು ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಾಣ ಮಾಡಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸುವರ್ಣ ವಿಧಾನಸೌಧದಲ್ಲಿ ಯಾವುದೇ ಸರಕಾರಿ ಕಚೇರಿಗಳು ಇರದ ಕಾರಣ, ಅದು ಬಿಳಿ ಆನೆಯಂತಾಗಿದೆ ಎಂದು ಒಕ್ಕೂಟದ ನಾಯಕ ಸೋಮಶೇಖರ್ ಕೊತ್ತಂಬರಿ ಹೇಳಿದ್ದಾರೆ. 

ಇನ್ನೊಂದೆಡೆ, ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಮಹದಾಯಿ ಯೋಜನೆ ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಹಲವು ವರ್ಷಗಳಿಂದ ಬೇಡಿಕೆ ಮುಂದುವರಿದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜ್ ಕರಿಗಾರ್ ಹೇಳಿದ್ದಾರೆ. ಅಲ್ಲದೆ, ಕೃಷ್ಣಾ ನದಿ ಯೋಜನೆಯ ಲಾಭವು ಇನ್ನೂ ರೈತರನ್ನು ತಲುಪಿಲ್ಲ. ಆದರೆ, ಬೆಂಗಳೂರು, ಮೈಸೂರು, ರಾಮನಗರ, ಹಾಸನ, ಮಂಡ್ಯ ಹಾಗೂ ಇತರೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಅಭಿವೃದ್ಧಿ ಕೇಂದ್ರಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ. 

ಕಳೆದ ವಾರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ರ‍್ಯಾಲಿ ನಡೆಸಿದ್ದ ಸಿಎಂ ಕುಮಾರಸ್ವಾಮಿ, ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಕೆಲ ಬಿಜೆಪಿ ನಾಯಕರು ಪ್ರತ್ಯೇಕ ರಾಜ್ಯದ ಪರವಾಗಿ ಮಾತನಾಡಿದ್ದರು.