ಪೌರತ್ವ ತಿದ್ದುಪಡಿ ಮಸೂದೆ: ಕೇಂದ್ರ ಸಂಪುಟ ಅನುಮೋದನೆ

0
689

ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಮಂಗಳವಾರ ಈ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ನವದೆಹಲಿ (ಪಿಟಿಐ): ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಪುಟ 2019 ಜನೇವರಿ 7  ಸೋಮವಾರ ಅನುಮೋದನೆ ನೀಡಿದೆ. ಮಂಗಳವಾರ ಈ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ತಿದ್ದುಪಡಿ ಮಸೂದೆ ಕುರಿತು ಜಂಟಿ ಸಂಸದೀಯ ಸಮಿತಿ ಸೋಮವಾರ ಲೋಕಸಭೆಯಲ್ಲಿ ವರದಿ ಮಂಡಿಸಿದ ಕೆಲವೇ ತಾಸುಗಳಲ್ಲಿ ಈ ಬೆಳವಣಿಗೆಯಾಗಿದೆ. 2016ರಲ್ಲಿ ಮೊದಲಿಗೆ ಸಂಸತ್ತಿನಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. 

ಅಸ್ಸಾಂ ಹಾಗೂ ಈಶಾನ್ಯ ಭಾಗದ ರಾಜ್ಯಗಳ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

1985ರ ಅಸ್ಸಾಂ ಒಪ್ಪಂದದ ಅನುಸಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಸಹ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಜಾರಿಗೆ ಬಂದರೆ, ಅಸ್ಸಾಂ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದು    ಇವರ ವಾದ. ಮೇಘಾಲಯ ಹಾಗೂ ಮಿಜೋರಾಂ ಸರ್ಕಾರಗಳು ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.

ತಿದ್ದುಪಡಿ ಏನು?: ಪ್ರಸ್ತುತ ಪೌರತ್ವ ಕಾಯ್ದೆ 1955ರ ಅನುಸಾರ,ಅಫ್ಗಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. 
ಆದರೆ ಈ ಕಾಯ್ದೆಗೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಅಡಿಯಲ್ಲಿ, ಇವರೆಲ್ಲಾ ಭಾರತದಲ್ಲಿ 6 ವರ್ಷ ವಾಸವಿದ್ದರೆ ಅವರು ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. 

ಬೆಂಬಲ ಹಿಂಪಡೆದ ಎಜಿಪಿ:  ಆಡಳಿತಾರೂಢ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಅಸ್ಸಾಂ ಗಣ ಪರಿಷದ್ (ಎಜಿಪಿ) ಸೋಮವಾರ ಹಿಂಪಡೆದಿದೆ.

‘ದೆಹಲಿಯಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಜತೆಗೆ ಎಜಿಪಿ ನಿಯೋಗ ಸಭೆ ನಡೆಸಿದಾಗ, ಮಂಗಳ
ವಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಳ್ಳುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದರು. ಬಳಿಕಬೆಂಬಲ ಹಿಂಪಡೆಯುವ ನಿರ್ಣಯ ಕೈಗೊಳ್ಳಲಾಯಿತು’ ಎಂದು ಎಜಿಪಿ ಅಧ್ಯಕ್ಷ ಹಾಗೂ ಸಚಿವ ಅತುಲ್ ಬೋರಾ ತಿಳಿಸಿದರು.

ಬಂದ್‌ಗೆ ಕರೆ

ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳ 8 ಪ್ರಭಾವಿ ವಿದ್ಯಾರ್ಥಿ ಸಂಘಟನೆಗಳು, ಅಸ್ಸಾಂನ 40 ಸಾಮಾಜಿಕ ಸಂಘಟನೆಗಳು ಮಂಗಳವಾರ 11 ತಾಸುಗಳ ಬಂದ್‌ಗೆ ಕರೆ ನೀಡಿವೆ. 

 ಮಸೂದೆ ಒಪ್ಪದ ವಿರೋಧ ಪಕ್ಷಗಳು

ಕಾಂಗ್ರೆಸ್, ಟಿಎಂಸಿ, ಸಿಪಿಐ(ಎಂ) ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಇದಕ್ಕೆ ವಿರೋಧಿಸುತ್ತಿವೆ. ಪೌರತ್ವ ಸಾಂವಿಧಾನಿಕ ವಿಷಯ. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲಾಗುವುದಿಲ್ಲ ಎನ್ನುವುದು ಇವರ ನಿಲುವು. 

‘ಅಸ್ಸಾಂ ಹಿಂದೂಗಳು ಅಲ್ಪಸಂಖ್ಯಾತರಾಗುವ ಭೀತಿ’

ಗುವಾಹಟಿ: ಈ ಮಸೂದೆ ಅಂಗೀಕಾರವಾಗದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಅಸ್ಸಾಂ ಹಿಂದೂಗಳು ಅಲ್ಪಸಂಖ್ಯಾತರಾಗಲಿದ್ದಾರೆ ಎಂದು ಅಸ್ಸಾಂನ ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ. 

ಮಸೂದೆ ಅಂಗೀಕಾರವಾಗದಿದ್ದರೆ, ಅಸ್ಸಾಂ ಮತ್ತೊಂದು ಕಾಶ್ಮೀರವಾಗಲಿ ಎಂದು ಬಯಸುವವರಿಗೆ ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.