ಪೊಲೀಸರಿಗೆ ಹೊಸವರ್ಷಕ್ಕೆ ಪರಿಷ್ಕೃತ ವೇತನ: ಎಚ್‌ಡಿಕೆ

0
1026

ಪೊಲೀಸ್ ಸಿಬ್ಬಂದಿ ವೇತನ, ಭತ್ಯೆ, ಸೌಲಭ್ಯ ಹೆಚ್ಚಳ ಕುರಿತು ಔರಾದಕರ ವರದಿ ಶಿಫಾರಸಿನ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಜತೆಗೆ ಚರ್ಚಿಸಿ ಹೊಸ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಬೆಂಗಳೂರು: ಪೊಲೀಸ್ ಸಿಬ್ಬಂದಿ ವೇತನ, ಭತ್ಯೆ, ಸೌಲಭ್ಯ ಹೆಚ್ಚಳ ಕುರಿತು ಔರಾದಕರ ವರದಿ ಶಿಫಾರಸಿನ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಜತೆಗೆ ಚರ್ಚಿಸಿ ಹೊಸ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ವಿಧಾನಸೌಧದ ಮುಂಭಾಗದಲ್ಲಿ ಡಿಸೆಂಬರ್ 26 ರ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್‌ ಸಿಬ್ಬಂದಿಗೆ 911 ದ್ವಿಚಕ್ರ ಗಸ್ತು ವಾಹನವನ್ನು ಹಸ್ತಾಂತರಿಸಿ ಮಾತನಾಡಿದರು.

ಪೊಲೀಸ್ ಅಧಿಕಾರಿಗಳು ಜನರ ರಕ್ಷಣೆಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೂಲಸೌಲಭ್ಯಗಳನ್ನು ಒದಗಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದರು.

7 ಕೋಟಿ ವೆಚ್ಚದಲ್ಲಿ ಈ ದ್ವಿಚಕ್ರ ವಾಹನಗಳನ್ನು ಖರೀದಿಸಲಾಗಿದೆ. ಹೊಸ ವರ್ಷದಲ್ಲಿ ಮತ್ತಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಇವು ಅನುಕೂಲವಾಗಲಿವೆ ಎಂದರು.

ಜಿ.ಪರಮೇಶ್ವರ ಮಾತನಾಡಿ, ‘ಬೆಂಗಳೂರು ಪೊಲೀಸರು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇಲಾಖೆಗೆ ಇನ್ನಷ್ಟು ಬಲ ತುಂಬಲು ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ. ಈಗಾಗಲೇ 300 ಹೊಯ್ಸಳ ಕಾರುಗಳು ಗಸ್ತು ತಿರುಗುತ್ತಿವೆ. ಆದರೆ, ಕೆಲವು ಬೀದಿಗಳಿಗೆ ಕಾರುಗಳು ಹೋಗಲು ಸಾಧ್ಯವಿಲ್ಲ.‌ ಹೀಗಾಗಿ ನಗರದೆಲ್ಲೆಡೆ ಗಸ್ತು ತಿರುಗಲು ಬೈಕ್‌ಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.