ಪುಷ್ಪ ತ್ಯಾಜ್ಯದ ಮರುಬಳಕೆ: ಭಾರತದ ‘ಹೆಲ್ಪ್ ಅಸ್‌ ಗ್ರೀನ್’ ನವೋದ್ಯಮಕ್ಕೆ ವಿಶ್ವಸಂಸ್ಥೆ ಗೌರವ

0
611

ದೇವಸ್ಥಾನಗಳಿಂದ ನದಿ ಸೇರುವ ಸಾವಿರಾರು ಟನ್ ಹೂವಿನ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ, ಗಂಗಾ ನದಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಭಾರತದ ನವೋದ್ಯಮವೊಂದು ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿದೆ.

ಕ್ಯಾಟೊವೈಸ್‌ (ಪೋಲೆಂಡ್‌) (ಪಿಟಿಐ): ದೇವಸ್ಥಾನಗಳಿಂದ ನದಿ ಸೇರುವ ಸಾವಿರಾರು ಟನ್ ಹೂವಿನ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ, ಗಂಗಾ ನದಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಭಾರತದ ನವೋದ್ಯಮವೊಂದು ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿದೆ.

ವಿಶ್ವಸಂಸ್ಥೆ ವತಿಯಿಂದ ಡಿಸೆಂಬರ್ 11 ರ ಮಂಗಳವಾರ ನಡೆದ ಹವಾಮಾನ ಬದಲಾವಣೆ ಸಮಾವೇಶದ ವಿಶೇಷ ಸಮಾರಂಭದಲ್ಲಿ, ಭಾರತದ  ‘ಹೆಲ್ಪ್ ಅಸ್‌ ಗ್ರೀನ್’ ನವೋದ್ಯಮದ ಜತೆಗೆ 13 ದೇಶಗಳಿಗೆ ‘ಯುನೈಟೆಡ್‌ ನೇಷನ್ಸ್‌ ಕ್ಲೈಮೇಟ್‌ ಆ್ಯಕ್ಷನ್‌ ಅವಾರ್ಡ್‌’ ನೀಡಲಾಯಿತು.

ದೇಗುಲ ತ್ಯಾಜ್ಯದ ಸಮಸ್ಯೆಗೆ ಉತ್ತರ ಪ್ರದೇಶ ಮೂಲದ ‘ಹೆಲ್ಪ್ ಅಸ್‌ ಗ್ರೀನ್’ ನವೋದ್ಯಮವು ವಿಶ್ವದ ಮೊದಲ ಲಾಭದಾಯಕ ಪರಿಹಾರವನ್ನು ರೂಪಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಉತ್ತರ ಪ್ರದೇಶದ ದೇವಾಲಯಗಳಿಂದ ಪ್ರತಿ ದಿನವೂ ಸಂಗ್ರಹವಾಗುವ 8.4 ಟನ್ ಹೂವಿನ ತ್ಯಾಜ್ಯವು ‘ಫ್ಲವರ್‌ ರಿಸೈಕ್ಲಿಂಗ್‌ (ಹೂವು ಮರುಬಳಕೆ) ತಂತ್ರಜ್ಞಾನದ ಮೂಲಕ ಕರಕುಶಲ ವಸ್ತು, ಮಾಲಿನ್ಯರಹಿತ ಊದುಕಡ್ಡಿ, ಸಾವಯವ ಗೊಬ್ಬರ ಹಾಗೂ ಸುಲಭವಾಗಿ ಕರಗಬಲ್ಲ ಪೊಟ್ಟಣಗಳಾಗಿ ಮಾರ್ಪಡುತ್ತಿದೆ. ಈವರೆಗೆ ಈ ನವೋದ್ಯಮ 11,060 ಟನ್‌ ತ್ಯಾಜ್ಯವನ್ನು ಹೀಗೆ ಮರು ಬಳಕೆಗೆ ಒದಗುವಂತೆ ಮಾಡಿದೆ. 

ಊದುಕಡ್ಡಿ ಮತ್ತಿತರ ಪೂಜಾ ಸಾಮಗ್ರಿಗಳ ಮೂಲಕ ನದಿ ಸೇರುತ್ತಿದ್ದ 110 ಟನ್‌ ರಾಸಾಯನಿಕ ಕೀಟನಾಶಕವನ್ನು ತಡೆಯಲಾಗಿದೆ. ಈ ಮೂಲಕ, ಆರ್ಸೆನಿಕ್, ಸೀಸ ಮತ್ತು ಕ್ಯಾಡ್ಮಿಯಂನಂತಹ ಕೀಟನಾಶಕಗಳು ನದಿಯ ನೀರನ್ನು ಮಲಿನಗೊಳಿಸಿ, ಜಲಚರಗಳಿಗೆ ಕಂಟಕವಾಗುತ್ತಿದ್ದುದನ್ನು ತಪ್ಪಿಸಲಾಗಿದೆ.

ವಿಶ್ವಸಂಸ್ಥೆಯ ಪ್ರಕಾರ, ‘ಹೆಲ್ಪ್ ಅಸ್‌ ಗ್ರೀನ್’ ಆರಂಭವಾದಾಗಿನಿಂದ ಇಲ್ಲಿಯವರೆಗೆ 1,260 ಮಹಿಳೆಯರನ್ನು ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ, ಹಿಂದೆ ಪೌರಕಾರ್ಮಿಕರಾಗಿ ದುಡಿಯುತ್ತಿದ್ದ ಮಹಿಳೆಯರ 19 ಮಕ್ಕಳು ಶಾಲೆಗೆ ಹೋಗತೊಡಗಿದ್ದಾರೆ. 73 ಪೌರ ಕಾರ್ಮಿಕ ಕುಟುಂಬಗಳ ಆದಾಯ ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ. ಸ್ಥಿರ ಆದಾಯದ ಮೂಲಕ 365 ಕುಟುಂಬಗಳ ಜೀವನಮಟ್ಟ ಸುಧಾರಿಸಿದೆ.

ವಿಶ್ವದಾದ್ಯಂತ ಹವಾಮಾನ ಬದಲಾವಣೆ ಸಂಬಂಧ ಇಂತಹ ಚಟುವಟಿಕೆ ಉತ್ತೇಜನಕಾರಿಯಾಗಿದೆ. ಇಂತಹ ಆವಿಷ್ಕಾರ ಬದಲಾವಣೆ ತರಲಿದೆ

–ಪ್ಯಾಟ್ರಿಷಿಯ ಎಸ್ಪಿನೊಸಾ, ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ವಿಭಾಗದ ಕಾರ್ಯನಿರ್ವಾಹಕ ಕಾರ್ಯದರ್ಶಿ