ಪುರುಷನ ವಿವಾಹೇತರ ಸಂಬಂಧ ಅಪರಾಧವಲ್ಲ: ಸುಪ್ರೀಂಕೋರ್ಟ್​ ಮಹತ್ವದ ತೀರ್ಪು

0
1364

ಪುರುಷನೊಬ್ಬನ ವಿವಾಹೇತರ ಸಂಬಂಧ ಕ್ರಿಮಿನಲ್​ ಅಪರಾಧವಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ನೀಡಿದೆ. ಅನೈತಿಕ ಸಂಬಂಧ ವಿಚ್ಛೇದನಕ್ಕೆ ದಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅದನ್ನು ಕ್ರಿಮಿನಲ್​ ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಐಪಿಸಿ ಸೆಕ್ಷನ್​ 497 ಅನ್ನು ಅಸಾಂವಿಧಾನಿಕ ಎಂದು ಹೇಳಿದೆ.

ನವದೆಹಲಿ: ಪುರುಷನೊಬ್ಬನ ವಿವಾಹೇತರ ಸಂಬಂಧ ಕ್ರಿಮಿನಲ್​ ಅಪರಾಧವಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ನೀಡಿದೆ. ಅನೈತಿಕ ಸಂಬಂಧ ವಿಚ್ಛೇದನಕ್ಕೆ ದಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅದನ್ನು ಕ್ರಿಮಿನಲ್​ ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಐಪಿಸಿ ಸೆಕ್ಷನ್​ 497 ಅನ್ನು ಅಸಾಂವಿಧಾನಿಕ ಎಂದು ಹೇಳಿದೆ.

ಬ್ರಿಟಿಷರ ಕಾಲದ 158 ವರ್ಷಗಳ ಹಿಂದಿನ ಐಪಿಸಿ ಸೆಕ್ಷನ್​ 497ರ ಪ್ರಕಾರ ಅನೈತಿಕ ಸಂಬಂಧ ಇಟ್ಟುಕೊಳ್ಳುವ ವಿವಾಹಿತ ಪುರುಷರಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಮಹಿಳೆಗೆ ಯಾವುದೇ ಶಿಕ್ಷೆ ಇರಲಿಲ್ಲ. ವಿವಾಹಿತ ಮಹಿಳೆಯೊಂದಿಗೆ, ಆಕೆಯ ಪತಿಯ ಅನುಮತಿ ಇಲ್ಲದೇ ಯಾವುದೇ ಪುರುಷನು ಸಂಬಂಧ ಇಟ್ಟುಕೊಂಡಲ್ಲಿ, ಪುರುಷನಿಗೆ ಮಾತ್ರ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವುದು ಸರಿಯಲ್ಲ ಎಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಬಳಿಕ ಹೇಳಿದ್ದ ಸುಪ್ರೀಂಕೋರ್ಟ್​ ತೀರ್ಪು ಕಾಯ್ದಿರಿಸಿತ್ತು.

ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಇಂದು ತೀರ್ಪು ಪ್ರಕಟಿಸಿ,, ಪುರುಷರು ಪತ್ನಿಯನ್ನು ತಮ್ಮ ಅಡಿಯಾಳೆಂದು ಹಾಗೂ ಮಹಿಳೆಗೆ ಗಂಡ ಯಜಮಾನನಲ್ಲ. ನಾವು ಅನೈತಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಿದರೆ ಮತ್ತೆ ಹಿಂದೆ ಹೋದಂತೆ ಆಗುತ್ತದೆ. ಅಲ್ಲದೆ, ಅತೃಪ್ತ ಜನರಿಗೆ ಶಿಕ್ಷೆ ನೀಡಿದಂತೆ ಆಗುತ್ತದೆ. ಅಲ್ಲದೆ, ಹಲವು ದೇಶಗಳೂ ಕೂಡ ಅನೈತಿಕ ಸಂಬಂಧದ ವಿರುದ್ಧದ ಕಾನೂನುಗಳನ್ನು ರದ್ದುಗೊಳಿಸಿವೆ ಎಂದು ನ್ಯಾಯಾಲಯ ಹೇಳಿದೆ.

ನಾಗರಿಕ ಸಮಾಜದಲ್ಲಿ ಮಹಿಳೆಯರ ವೈಯಕ್ತಿಕ ಘನತೆ ಮೇಲೆ ಕೆಟ್ಟ ಪರಿಣಾಮ ಬೀರುವ ಯಾವುದೇ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸಿಜೆಐ ದೀಪಕ್​ ಮಿಶ್ರಾ ಹೇಳಿದ್ದಾರೆ. ಹಾಗೇ ಯಾವುದೇ ಸಂದರ್ಭದಲ್ಲಿ ಮಹಿಳೆಯರನ್ನು ಅಸಮಾನತೆಯಿಂದ ಕಾಣುವುದು ಸಂವಿಧಾನ ಬದ್ಧವಲ್ಲ. ಪುರುಷರು ಮಹಿಳೆಯನ್ನು ತಮ್ಮ ಆಸ್ತಿ ಎಂದು ಪರಿಭಾವಿಸಬಾರದು ಎಂದು ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.